ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಎಚ್ಡಿಆರ್ ಬ್ರಾಕಿಥೆರಪಿ ಕುರಿತು ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮ
ಮಂಗಳೂರು, ಅಕ್ಟೋಬರ್ 31: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಅಂಗಸಂಸ್ಥೆಯಾದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಮಂಗಳೂರಿನ ರೇಡಿಯೇಶನ್ ಆಂಕಾಲಜಿ ವಿಭಾಗವು ‘ಹೈ ಡೋಸ್ ರೇಟ್ (ಎಚ್ಡಿಆರ್) ಬ್ರಾಕಿಥೆರಪಿ’ ಕುರಿತ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ. ಆಧುನಿಕ ಬ್ರಾಕಿಥೆರಪಿ ಚಿಕಿತ್ಸಾ ಪದ್ಧತಿಯಲ್ಲಿ ವ್ಯವಸ್ಥಿತ ತರಬೇತಿ ಪಡೆಯಲು ಈ ಕಾರ್ಯಕ್ರಮದಲ್ಲಿ ಮಾರಿಷಸ್ನ ರೇಡಿಯೇಶನ್ ಆಂಕಾಲಜಿಸ್ಟ್ಗಳು ಮತ್ತು ವೈದ್ಯಕೀಯ ಭೌತವಿಜ್ಞಾನಿಗಳು (ಮೆಡಿಕಲ್ ಫಿಸಿಕ್ಸ್ ತಜ್ಞರು) ಭಾಗವಹಿಸಿದ್ದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಜಾಗತಿಕ ಬ್ರಾಕಿಥೆರಪಿ ಪರಿಹಾರಗಳ ಸಂಸ್ಥೆಯಾದ ‘ಬೆಬಿಗ್ ಮೆಡಿಕಲ್’ (BEBIG Medical) ಜಂಟಿ ಸಹಯೋಗದಲ್ಲಿ ಈ ಉದ್ಯಮ-ಶೈಕ್ಷಣಿಕ ಸಹಭಾಗಿತ್ವದ ಕಾರ್ಯಕ್ರಮ ನಡೆಯಿತು. ಇದು ಸಂಸ್ಥೆಯ ಶೈಕ್ಷಣಿಕ ಮತ್ತು ಕ್ಲಿನಿಕಲ್ ಅನುಭವವನ್ನು ಉದ್ಯಮ ಪಾಲುದಾರರ ತಾಂತ್ರಿಕ ಪರಿಣತಿಯೊಂದಿಗೆ ಸಂಯೋಜಿಸಿತು.
ಕೆಎಂಸಿ ಮಂಗಳೂರಿನ ಅರಿವಳಿಕೆ ವಿಭಾಗ ಮತ್ತು ರೇಡಿಯೋಡಯಾಗ್ನೋಸಿಸ್ ವಿಭಾಗಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದವು.
ಈ ತರಬೇತಿಯು ಸಮಕಾಲೀನ ಎಚ್ಡಿಆರ್ ಬ್ರಾಕಿಥೆರಪಿಯ ಕ್ಲಿನಿಕಲ್ ಹಾಗೂ ತಾಂತ್ರಿಕ ಆಯಾಮಗಳನ್ನು ಒಳಗೊಂಡಿತ್ತು. ರೇಡಿಯೇಶನ್ ಆಂಕಾಲಜಿ ವಿಭಾಗದ ಅನುಭವಿ ಪ್ರಾಧ್ಯಾಪಕರು ಮತ್ತು ಬೆಬಿಗ್ ಮೆಡಿಕಲ್ ತಂಡದ ನೇತೃತ್ವದಲ್ಲಿ ನಡೆದ ಸಂವಾದಾತ್ಮಕ ಗೋಷ್ಠಿಗಳು ಹಾಗೂ ಪ್ರಾಯೋಗಿಕ ತರಬೇತಿಯಲ್ಲಿ ಪ್ರತಿನಿಧಿಗಳು ಪಾಲ್ಗೊಂಡರು.
ಪ್ರಮುಖವಾಗಿ ಈ ಕೆಳಗಿನ ವಿಷಯಗಳನ್ನು ಒಳಗೊಂಡಿತ್ತು:
ಎಚ್ಡಿಆರ್ ಬ್ರಾಕಿಥೆರಪಿಯ ತತ್ವಗಳು ಮತ್ತು ಕ್ಲಿನಿಕಲ್ ಅನ್ವಯಗಳು
ರೋಗಿಗಳ ಆಯ್ಕೆ, ಆಪ್ಲಿಕೇಟರ್ ವಿಧಾನಗಳು ಮತ್ತು ಚಿಕಿತ್ಸಾ ಪ್ರಕ್ರಿಯೆಯ ಹಂತಗಳು
ಇಮೇಜ್-ಗೈಡೆಡ್ ಟ್ರೀಟ್ಮೆಂಟ್ ಪ್ಲಾನಿಂಗ್ ಮತ್ತು ಡೋಸಿಮೆಟ್ರಿ
ಗುಣಮಟ್ಟ ಭರವಸೆ ಮತ್ತು ವಿಕಿರಣ ಸುರಕ್ಷತೆ
ಬ್ರಾಕಿಥೆರಪಿ ಉಪಕರಣಗಳು ಮತ್ತು ಪ್ಲಾನಿಂಗ್ ಸಿಸ್ಟಮ್ಗಳ ಕುರಿತ ತರಬೇತಿ
ಹಲವಾರು ಕ್ಯಾನ್ಸರ್ಗಳಿಗೆ, ವಿಶೇಷವಾಗಿ ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಸ್ತ್ರೀರೋಗ ಸಂಬಂಧಿತ (ಗೈನಕಾಲಾಜಿಕಲ್) ಕ್ಯಾನ್ಸರ್ಗಳಿಗೆ ಗುಣಪಡಿಸುವ ಚಿಕಿತ್ಸೆಯಲ್ಲಿ ಬ್ರಾಕಿಥೆರಪಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಈ ಚಿಕಿತ್ಸೆಯು ಹೆಚ್ಚಿನ ಜನರಿಗೆ ತಲುಪುವಂತೆ ಮಾಡಲು ನುರಿತ ವೈದ್ಯರು ಮತ್ತು ಭೌತವಿಜ್ಞಾನಿಗಳ ತಂಡವನ್ನು ರೂಪಿಸುವುದು ಅನಿವಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಪ್ರಾದೇಶಿಕ ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ ರೋಗಿಗಳ ಆರೈಕೆಯಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.
