Home Mangalorean News Kannada News ಕೇಂದ್ರೀಕರಿಸಿ ಆಟವಾಡಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ – ರವಿಕಿರಣ್ ಮುರ್ಡೇಶ್ವರ್

ಕೇಂದ್ರೀಕರಿಸಿ ಆಟವಾಡಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ – ರವಿಕಿರಣ್ ಮುರ್ಡೇಶ್ವರ್

Spread the love

ಕೇಂದ್ರೀಕರಿಸಿ ಆಟವಾಡಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ – ರವಿಕಿರಣ್ ಮುರ್ಡೇಶ್ವರ್

ಕುಂದಾಪುರ: ಪ್ರತಿಯೊಬ್ಬ ಕ್ರೀಡಾಪಟುವೂ ಸಾಧನೆಯ ಗುರಿಯನ್ನು ಕೇಂದ್ರೀಕರಿಸಿ ಆಟವಾಡಿದಾಗ ಮಾತ್ರ ಅವರು ನಿರೀಕ್ಷಿತ ಗುರಿಯನ್ನು ಮುಟ್ಟಲು ಸಾಧ್ಯ ಎಂದು ತಾಲ್ಲೂಕು ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ರವಿಕಿರಣ್ ಮುರ್ಡೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಡ ಗುಡ್ಡೆಯಂಗಡಿಯಲ್ಲಿ, ನಾಡ ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಡೆದ ಶ್ರೀರಾಮ್ ಫ್ರೆಂಡ್ಸ್-2024 ರ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆ, ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳ ಜೊತೆ ಬದುಕಿನ ಶ್ರೇಷ್ಠತೆಯನ್ನು ಸಾಧಿಸಲು ಸಹಾಯಕವಾಗುತ್ತದೆ. ಜಾತಿ-ಧರ್ಮ, ಮೇಲು-ಕೀಳು ಎನ್ನುವ ಅಂತರದ ಗೋಡೆಯನ್ನು ಹಾಕದೆ ನಾವೆಲ್ಲಾ ಒಂದು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿರುವುದು ಕೇವಲ ಕ್ರೀಡಾ ಕ್ಷೇತ್ರ ಮಾತ್ರ ಎನ್ನುವ ಗಟ್ಟಿ ಭಾವನೆಯನ್ನು ನಾವೆಲ್ಲಾ ಇರಿಸಿಕೊಳ್ಳಬೇಕು ಎಂದರು.

ಪತ್ರಕರ್ತ ರಾಜೇಶ್ ಕೆ.ಸಿ ಮಾತನಾಡಿ, ಸಮಾಜದಲ್ಲಿನ ಸಾಮರಸ್ಯ ಹಾಗೂ ಬಾಂಧವ್ಯವನ್ನು ವೃದ್ದಿಸುವ ಕ್ರೀಡೆಯನ್ನು ಉಳಿಸಿ- ಬೆಳೆಸುವಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಬೇಕು. ಕ್ರೀಡಾ ಪಂದ್ಯಾಟದ ಆಯೋಜನೆಯ ಜೊತೆ, ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸ ಇಲ್ಲಿ ನಡೆಯುತ್ತಿರುವುದು ಅತ್ಯಂತ ಸುತ್ಯರ್ಹ ಎಂದರು.

ಉದ್ಯಮಿ ಸಂಜಯ್ ಪೂಜಾರಿ ಬೆಂಗಳೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ ಪಡುಕೋಣೆ, ಉದ್ಯಮಿ ಕಿರಣ್ ಲೋಬೊ, ಮೂರ್ತೆದಾರರ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ಬಡಾಕೆರೆ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ ಮಾತನಾಡಿದರು.
ಮರವಂತೆ ಶ್ರೀಮಹಾರಾಜ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಮ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ನಾಡ ಗುಡ್ಡೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಮೊಗವೀರ ಪಂದ್ಯಾಟದ ಉದ್ಘಾಟನೆ ನೆರವೇರಿಸಿದರು. ಪತ್ರಕರ್ತ ಟಿ.ಪಿ ಮಂಜುನಾಥ, ರಾಮ್ ಪೂಜಾರಿ ಮುಲ್ಲಿಮನೆ, ಉದ್ಯಮಿಗಳಾದ ವಿಜಯ ಶೆಟ್ಟಿ ಬಡಾಕೆರೆ, ಸತೀಶ್ ಕೋಟಿ, ವಿಜಯಕೃಷ್ಣ ಪಡುಕೋಣೆ, ಚಂದ್ರಶೀಲ ಶೆಟ್ಟಿ, ಸತೀಶ್ ರಾಮನಗರ, ನಾಡ ಫ್ರೆಂಡ್ಸ್ ನ ರವಿ ಪೂಜಾರಿ ಬಡಾಕೆರೆ, ಕಿರಣ್ ಪಡುಕೋಣೆ, ಶಿಲ್ಷಕಿ ರಮಣಿ ರವಿ ಪೂಜಾರಿ ಇದ್ದರು.

ಸನ್ಮಾನ: ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್, ಪತ್ರಕರ್ತ ಟಿ.ಪಿ ಮಂಜುನಾಥ, ವೈದ್ಯಾಧಿಕಾರಿ ಡಾ. ಚಿಕ್ಮರಿ, ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ, ಕ್ರೀಡಾಪಟು ವಿಲ್ಸನ್ ಒಲಿವೆರಾ, ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ ಹಾಗೂ ಚೆಸ್ ಆಟಗಾರ್ತಿ ಛಾಯಾ ಸಿ ಪೂಜಾರಿ ಅವರನ್ನು ಗೌರವಿಸಲಾಯಿತು.


Spread the love

Exit mobile version