Home Mangalorean News Kannada News ಕೈಗಾರಿಕಾ ಪ್ರದೇಶಗಳ ರಸ್ತೆ ದುರಸ್ತಿಗೆ ಒತ್ತು: ಡಿಸಿ ಸೂಚನೆ, ಬೈಕಂಪಾಡಿ- ವೇಬ್ರಿಡ್ಜ್ ತಾತ್ಕಾಲಿಕ ಬಂದ್

ಕೈಗಾರಿಕಾ ಪ್ರದೇಶಗಳ ರಸ್ತೆ ದುರಸ್ತಿಗೆ ಒತ್ತು: ಡಿಸಿ ಸೂಚನೆ, ಬೈಕಂಪಾಡಿ- ವೇಬ್ರಿಡ್ಜ್ ತಾತ್ಕಾಲಿಕ ಬಂದ್

Spread the love

ಕೈಗಾರಿಕಾ ಪ್ರದೇಶಗಳ ರಸ್ತೆ ದುರಸ್ತಿಗೆ ಒತ್ತು: ಡಿಸಿ ಸೂಚನೆ, ಬೈಕಂಪಾಡಿ- ವೇಬ್ರಿಡ್ಜ್ ತಾತ್ಕಾಲಿಕ ಬಂದ್

ಮಂಗಳೂರು : ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ ಸೇರಿದಮತೆ ಅಗತ್ಯ ಮೂಲಸೌಕರ್ಯಗಳನ್ನು ಉತ್ತಮ ಸ್ಥಿತಿಯಲ್ಲಿರಿಸಲು ಆದ್ಯ ಗಮನಕೊಡಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಅವರು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ   ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.   ಮಂಗಳೂರಿನಲ್ಲಿ ಬೈಕಂಪಾಡಿ  ಕೈಗಾರಿಕಾ ಪ್ರದೇಶವಾಗಿ ಮಾರ್ಪಾಡಾಗಿರುವುದರಿಂದ ಇಲ್ಲಿ ಅನೇಕ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಕೂಡ ಇದೇ ಪ್ರದೇಶದಿಂದ ಹಾದು ಹೋಗುತ್ತಿದೆ. ಆದರೆ ಕೈಗಾರಿಕೆ ಪ್ರದೇಶದಲ್ಲಿ ಓಡಾಡುವ ವಾಹನಗಳ ಸಂಖ್ಯೆಯ ದಟ್ಟನೆಯಿಂದ ರಸ್ತೆಗಳು ಪದೇ ಪದೇ  ಕೆಟ್ಟು ಹೋಗುವುದರಿಂದ ಇಡೀ ಕೈಗಾರಿಕಾ ಪ್ರದೇಶದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ  ವಾಹನಗಳನ್ನು ತೂಕ ಮಾಡುವ 3 ವೇ ಬ್ರಿಡ್ಜ್‍ಗಳಿಂದಾಗಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು,  ಪ್ರಸಕ್ತ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ  ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕೈಗಾರಿಕಾ ಪ್ರದೇಶದ ಒಳಗೆ ಇರುವ ವೇ ಬ್ರೀಡ್ಜ್‍ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿನ ಕೈಗಾರಿಕಾ ಪ್ರದೇಶದ  ಅನೇಕ ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದರು. ಪುತ್ತೂರು ತಾಲೂಕಿನ ಕೈಗಾರಿಕಾ ಪ್ರದೇಶದ ರಸ್ತೆಗಳು ಕೆಟ್ಟು ಹೋಗಿರುವುದರಿಂದ ದುರಸ್ತಿಗಾಗಿ ಶಾಸಕರ ಅನುದಾನಕ್ಕೆ ಪ್ರಯತ್ನಿಸುವುದಾಗಿ  ಅವರು ಹೇಳಿದರು.

ಕಾರ್ನಾಡು ಕೈಗಾರಿಕಾ ಪ್ರದೇಶಕ್ಕೆ ಪ್ರಸಕ್ತ ಬೈಕಂಪಾಡಿ, ಮೂಲ್ಕಿ , ಕಾಟಿಪಳ್ಳದ ಮೂಲಕ 33 ಕೆವಿ ಲೈನ್‍ನಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು ವಿದ್ಯುತ್‍ನ ಅಭಾವ ತಲೆದೋರಿದೆ. ಆದುದರಿಂದ ಆ ಪ್ರದೇಶಕ್ಕೆ ಶೀಘ್ರವಾಗಿ 110 ಕೆವಿ ಎ ಲೈನ್ ಅಳವಡಿಸಿ ಕಾರ್ಯಗತಗೊಳಿಸಲು ಉದ್ಯಮಿಗಳು ಸಭೆಯಲ್ಲಿ ಭೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಅವರು ಮೆಸ್ಕಾಂ  ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತವಾದ ಸಮಸ್ಯೆಗಳು ಇರುವುದರಿಂದ ಅದರ ನಿರ್ವಹಣೆಗಾಗಿ ಕೈಗಾರಿಕೆಗಳು ತನ್ನಿಂದಾಗುವ ಅಭಿವೃದ್ದಿ ಕಾರ್ಯಗಳನ್ನು ನಡೆಸುವಂತೆ ಅವರು ವಿನಂತಿಸಿದರು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಆಯುಕ್ತ ಗೋಕುಲ್‍ದಾಸ್ ನಾಯಕ್, ವಿವಿಧ ಇಲಾಖೆಯ ಅಧಿಕಾರಿಗಳು, ಸಣ್ಣ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version