ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಡ್ರಗ್ಸ್ ಮುಕ್ತ ಕಾರ್ಯಾಚರಣೆ – ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಡ್ರಗ್ಸ್, ಗಾಂಜಾ ಮತ್ತಿತರ ಮಾದಕ ವಸ್ತುಗಳ ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಮುಂದುವರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅವರು ಮಂಗಳವಾರ ಪುರಭವನದಲ್ಲಿ ಡ್ರಗ್ಸ್, ಮಾದಕ ವಸ್ತುಗಳ ಜಾಗೃತಿ ಪ್ರಯುಕ್ತ ನಡೆದ ವಿವಿಧ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದರು.
ಡ್ರಗ್ಸ್ ವಿತರಣಾ ಜಾಲವನ್ನು ನಿಲ್ಲಿಸಲು ಪೊಲಿಸ್ ಇಲಾಖೆಯು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ತಪಾಸಣೆಯಲ್ಲಿ ಯಾವುದೇ ಡ್ರಗ್ಸ್ ಪಾಸಿಟಿವ್ ಕಂಡು ಬಂದಿರುವುದಿಲ್ಲ. ಇದರಿಂದ ನಶಮುಕ್ತ ಮಂಗಳೂರು ಅಭಿಯಾನವು ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಎಲ್ಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ಕ್ರಿಯಾಶೀಲಗೊಳಿಸಬೇಕು. ಮಾದಕ ವಸ್ತುಗಳ ಪ್ರಭಾವಕ್ಕೊಳಗಾದ ಸಂಶಯಾಸ್ಪದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಕೌನ್ಸೆಲಿಂಗ್ ಮೂಲಕ ಹೊರ ತರಬೇಕು. ಈ ನಿಟ್ಟಿನಲ್ಲಿ ಅಗತ್ಯ ನೆರವನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ಸಂಸ್ಥೆಗಳ ಕ್ಯಾಂಪಸನ್ನು ಶುದ್ಧಗೊಳಿಸುವ ಇಂತಹ ಚಟಗಳಿಂದ ಮುಕ್ತ ಮಾಡುವ ಈ ಅಭಿಯಾನದಲ್ಲಿ ಕಾಲೇಜುಗಳು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಆಗಿಂದಾಗೆ ಭೇಟಿ ನೀಡಲಿದ್ದಾರೆ. ಡ್ರಗ್ಸ್ ಪ್ರಭಾವಿತ ವಿದ್ಯಾರ್ಥಿಗಳನ್ನು ಸಂತ್ರಸ್ತರೆಂದು ಪರಿಗಣಿಸಲಾಗುವುದು. ಆದರೆ ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೋಲಿಸ್ ಆಯುಕ್ತರು ತಿಳಿಸಿದರು.
ಮಂಗಳೂರಿನಲ್ಲಿ ಡ್ರಗ್ಸ್ ವ್ಯಾಪಕವಾಗಿದೆ ಎಂದು ಕೇಳಿ ಬರುತ್ತಿದೆ. ಆದರೆ 2025 ಜೂನ್ 1 ರಿಂದ 2026ರ ಜನವರಿ 17ರ ವರೆಗೆ ವಿವಿಧ ಕಾಲೇಜುಗಳಲ್ಲಿ 5356 ಡ್ರಗ್ಸ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದರಲ್ಲಿ ಕೇವಲ 14 ಪ್ರಕರಣಗಳು ಕಂಡು ಬಂದಿದೆ. ಇದು ಜಿಲ್ಲೆಯಲ್ಲಿ ಡ್ರಗ್ಸ್ ಚಟುವಟಿಕೆ ಕಡಿಮೆಯಾಗಿರುವ ಸಂಕೇತವಾಗಿದೆ ಎಂದು ಹೇಳಿದರು.
ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಎಂದು ಅವರ ತಿಳಿಸಿದರು.
ಪಿಜಿಗಳಿಗೆ ಪೊಲೀಸ್ ಎನ್.ಓ.ಸಿ
ನಗರದಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಪಿಜಿಗಳಿಗೆ ಲೈಸೆನ್ಸ್ ನೀಡುವ ಮೊದಲು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣ ಪತ್ರ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಭಿಕರು, ಈ ಬಗ್ಗೆ ಪ್ರಸ್ತಾಪಿಸಿ ಪಿಜಿಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇವುಗಳಲ್ಲಿ ಡ್ರಗ್ಸ್ ಸೇವನೆಗೆ ಪೂರಕವಾಗಿ ಇರುತ್ತದೆ. ಪಿಜಿಗಳ ಕಾರ್ಯಾಚರಣೆ ಬಗ್ಗೆ ಪೊಲೀಸರಿಗೂ ಮಾಹಿತಿ ಇರುವುದಿಲ್ಲ ಎಂದು ಪೊಲೀಸ್ ಆಯುಕ್ತರ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಅವರು, ಪಿಜಿ ಸ್ಥಾಪನೆಗೆ ನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಲೈಸೆನ್ಸ್ ನೀಡುವ ಮೊದಲು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳಲು ಪರಿಶೀಲಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪ ಪೊಲೀಸ್ ಆಯುಕ್ತ ಮಿಥುನ್ ಹೆಚ್. ಎನ್, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಎಎಸ್ಪಿ ಅನಿಲ್ ಕುಮಾರ್ ಮತ್ತಿತರಿದ್ದರು.
