Home Mangalorean News Kannada News ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Spread the love

ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕುಶಾಲನಗರ: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್  ರೂಪಾಂತರಿ ಜೆಎನ್.1 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೆ, ಯಾವುದೇ ನಿರ್ಬಂಧ ಹೇರುವ ಯೋಚನೆ ಸದ್ಯಕ್ಕಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಹೇಳಿದರು. ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಮಾತನಾಡಿದ ಅವರು, ಕೊರೊನಾ ರೂಪಾಂತರಿ ಬಗ್ಗೆ ಯಾರೂ ಸಹ ಆತಂಕಪಡಬೇಕಿಲ್ಲ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೃದಯ ಸಂಬಂಧಿ ಸಮಸ್ಯೆ ಇದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧವಾಗಿಡಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.

ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರಷ್ಟೇ ನಿಷೇಧ, ನಿರ್ಬಂಧ ಇತ್ಯಾದಿ ಕ್ರಮಗಳ ಬಗ್ಗೆ ಯೋಚನೆ ಮಾಡುತ್ತೇವೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಈ ಮಧ್ಯೆ, ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚಳ ವಿಚಾರವಾಹಿ ಕಲಬುರಗಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕೊರೊನಾ ರೂಪಾಂತರಿ ಎಷ್ಟರಮಟ್ಟಿಗೆ ಅಪಾಯಕಾರಿ ಇದೆ ಅನ್ನೊದು ಇನ್ನೂ ತಿಳಿದಿಲ್ಲ. ಸ್ಪಷ್ಟ ಮಾಹಿತಿ ಬರಬೇಕಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈಗಾಗಲೇ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ. ರಾಜ್ಯದ ಮೆಡಿಕಲ್ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರ ಎಲ್ಲಾ ರೀತಿಯಲ್ಲೂ ಸನ್ನದ್ದವಾಗಿದೆ ಎಂದು ಅವರು ಹೇಳಿದ್ದಾರೆ.


Spread the love

Exit mobile version