Home Mangalorean News Kannada News ಕೊರೊನಾ: ವಿದೇಶದಿಂದ ಬಂದವರು ಸ್ವಯಂ ಘೋಷಣೆ ಮಾಡಿಕೊಳ್ಳಿ – ಡಾ. ಸುಧೀರ್ ಚಂದ್ರ ಸೂಡ

ಕೊರೊನಾ: ವಿದೇಶದಿಂದ ಬಂದವರು ಸ್ವಯಂ ಘೋಷಣೆ ಮಾಡಿಕೊಳ್ಳಿ – ಡಾ. ಸುಧೀರ್ ಚಂದ್ರ ಸೂಡ

Spread the love

ಕೊರೊನಾ: ವಿದೇಶದಿಂದ ಬಂದವರು ಸ್ವಯಂ ಘೋಷಣೆ ಮಾಡಿಕೊಳ್ಳಿ – ಡಾ. ಸುಧೀರ್ ಚಂದ್ರ ಸೂಡ

ಉಡುಪಿ: ಉಡುಪಿ ಜಿಲ್ಲೆಗೆ ವಿದೇಶದಿಂದ ಬಂದ ವ್ಯಕ್ತಿಗಳು, ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ, ತಾವು ವಿದೇಶದಿಂದ ಬಂದಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಕೊರೋನಾ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಫೆಬ್ರವರಿ 25 ರ ಬಳಿಕ ವಿದೇಶಗಳಿಂದ ಆಗಮಿಸಿರುವ ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಹಾಗೂ ಸಾರ್ವಜನಿಕರು ವಿದೇಶಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯಿದ್ದಲ್ಲಿ ಆರೋಗ್ಯ ಇಲಾಖೆಗೆ ತಿಳಿಸುವ ಮೂಲಕ ಕರೋನಾ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಹೇಳಿದ ಅವರು, ಮಾಹಿತಿ ನೀಡಿದವರ ಹಾಗೂ ಶಂಕಿತ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ವಿದೇಶಗಳಿಗೆ ಭೇಟಿ ನೀಡಿ ವಾಪಾಸಾದವರು 14 ದಿನಗಳವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, ಮನೆಯಲ್ಲಿಯೆ ಪ್ರತ್ಯೇಕವಾಗಿದ್ದು, ರೋಗದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು. ಕೊರೊನಾ ಸೋಂಕಿನ ಸ್ಯಾಂಪಲ್ ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನಲ್ಲಿರುವ 2 ಲ್ಯಾಬ್‍ಗಳ ಜೊತೆಗೆ ಹೊಸದಾಗಿ ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು, ಕೊರೊನ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾದ್ಯಮದಲ್ಲಿ ಬಹಿರಂಗಪಡಿಸದಂತೆ ಡಿಹೆಚ್‍ಓ ತಿಳಿಸಿದರು.

ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸವೇಕ್ಷಣಾ ಘಟಕದ ದೂ.ಸಂ. 0820-2525561 ಗೆ ಮಾಹಿತಿ ನೀಡುವಂತೆ ಹಾಗೂ ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್ ಮುಂತಾದ ಸಾರ್ವಜನಿಕ ವಾಹನ ಬಳಸದಂತೆ ತಿಳಿಸಿದ ಡಾ. ಸೂಡಾ, ಅರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ, ಅದೇ ವಾಹನದಲ್ಲಿ ಕರೆ ತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ (ಕೋವಿಡ್-19) ಕೇಸ್‍ಗಳು ಪತ್ತೆಯಾಗಿಲ್ಲ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಗರ ತಾಲೂಕಿನ ಮಹಿಳೆಯಲ್ಲಿ ಕೊರೊನಾ ರೋಗದ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿ ಬಂದಿದ್ದು, ಮಹಿಳೆಗೆ ವಯೋಸಹಜ ಇತರೆ ಆರೋಗ್ಯ ಸಮಸ್ಯೆಗಳಿಂದ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಆರ್.ಸಿ.ಎಚ್ ಅಧಿಕಾರಿ ಡಾ. ಎಮ್.ಜಿ.ರಾಮ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಸತೀಶ್ ರಾವ್, ಜಿಲ್ಲಾ ಕರೊನಾ ನಿಯಂತ್ರಣ ಕಾರ್ಯಪಡೆಯ ಸದಸ್ಯರಾದ ಡಾ. ತೇಜಸ್ವಿನಿ, ಪ್ರೀತಮ್, ಗಿರೀಶ್ ಕಡ್ಡೀಪುಡಿ ಉಪಸ್ಥಿತರಿದ್ದರು.


Spread the love

Exit mobile version