ಕೊಲ್ಲೂರು: ಬೈಕ್ ಸವಾರನಿಗೆ ಹಲ್ಲೆ ಜೀವ ಬೆದರಿಕೆ: ನಾಲ್ವರ ವಿರುದ್ದ ದೂರು ದಾಖಲು
ಕುಂದಾಪುರ: ವಂಡ್ಸೆ ಬಸ್ ನಿಲ್ದಾಣದ ಬಳಿ ಬೈಕ್ ಹಾಗೂ ರಿಕ್ಷಾ ಚಾಲಕರಿಗೆ ವಾಹನ ಚಲಾಯಿಸಲು ಅಡ್ಡಿ ಆತಂಕ ಉಂಟು ಮಾಡಿದ ಕಾರು ಚಾಲಕ ಹಾಗೂ ಸಂಗಡಿಗರನ್ನು ಪ್ರಶ್ನಿಸಿದ ಬೈಕ್ ಸವಾರನಿಗೆ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ತೂರು ನಿವಾಸಿ ಧನಂಜಯ (33) ಅವರು ಹೆಮ್ಮಾಡಿ ಕಡೆಯಿಂದ ಚಿತ್ತೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಚಿತ್ತೂರು ಕಡೆಯಿಂದ ವಂಡ್ಲೆ ಕಡೆಗೆ ಬರುತ್ತಿದ್ದ ಕಾರೊಂದು ತೀರಾ ಬಲಬದಿಗೆ ಬಂದ ಕಾರಣ ಧನಂಜಯ ಬೈಕನ್ನು ರಸ್ತೆ ಎಡಬದಿಯಲ್ಲಿ ನಿಲ್ಲಿಸಿದ್ದರು. ಅದೇ ಸಂದರ್ಭಅವರ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕೂಡ ಕಾರಿನವರು ಬಲಬದಿಗೆ ಬಂದು ತೊಂದರೆ ನೀಡಿದರು.
ಅವರ ವರ್ತನೆಯ ಬಗ್ಗೆ ರಿಕ್ಷಾ ಚಾಲಕ ಪ್ರಶ್ನಿಸಿದಾಗ ಕಾರಿನಲ್ಲಿದ್ದ ಸುಶಾಂತ, ರಂಜಿತ್, ಪುನೀತ್ ಹಾಗೂ ಸುಕೇಶ ಅವರು ಜಗಳಕ್ಕೆ ಇಳಿದರು. ಅದನ್ನು ಕಂಡ ಧನಂಜಯ ಅವರು ಕಾರಿನಲ್ಲಿದ್ದವರ ನಡೆಯನ್ನು ಆಕ್ಷೇಪಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು ಧನಂಜಯ ಅವರನ್ನು ತಳ್ಳಿ ಕೈಗಳಿಂದ ಹೊಡೆದುದಲ್ಲದೆ ‘ಪೊಲೀಸರಿಗೆ ದೂರು ನೀಡಿದರೆ ಹೊಡೆದು ಕೊಂದು ಹಾಕುತ್ತೇವೆ’ ಎಂದು ಜೀವ ಬೆದರಿಕೆ ಒಡ್ಡಿದರು ಎಂದು ಧನಂಜಯ ಅವರು ಕೊಲ್ಲೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಧನಂಜಯ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.