Home Mangalorean News Kannada News ಕೌಶಲ್ಯಾಭಿವೃದ್ಧಿಯಲ್ಲೂ ಉಡುಪಿ ಮಾದರಿಯಾಗಲಿ- ಪ್ರಮೋದ್ ಮಧ್ವರಾಜ್

ಕೌಶಲ್ಯಾಭಿವೃದ್ಧಿಯಲ್ಲೂ ಉಡುಪಿ ಮಾದರಿಯಾಗಲಿ- ಪ್ರಮೋದ್ ಮಧ್ವರಾಜ್

Spread the love

ಕೌಶಲ್ಯಾಭಿವೃದ್ಧಿಯಲ್ಲೂ ಉಡುಪಿ ಮಾದರಿಯಾಗಲಿ- ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ಜಿಲ್ಲೆ ರಾಜ್ಯಕ್ಕೆ ಹಲವು ಉತ್ತಮ ಮಾದರಿಗಳನ್ನು ನೀಡಿದ್ದು, ಜಿಲ್ಲೆ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿಯಲ್ಲೂ ಪ್ರಥಮ ಸ್ಥಾನವನ್ನು ಗಳಿಸಿದೆ. ಕೌಶಲ್ಯ ತರಬೇತಿಯಲ್ಲೂ ಜಿಲ್ಲೆ ಪ್ರಥಮವನ್ನು ದಾಖಲಿಸಲಿ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿ ನಗರಸಭಾ ವ್ಯಾಪ್ತಿಯ ಬೋರ್ಡ್ ಹೈಸ್ಕೂಲ್‍ನ ಶಾಲಾ ಆವರಣದಲ್ಲಿ ವೆಬ್ ಪೋರ್ಟ್‍ಲ್ ಹಾಗೂ ಕೌಶಲ್ಯ ತರಬೇತಿ ಆಕಾಂಕ್ಷಿತ ಯುವ ಜನರ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಜಿಲ್ಲೆ ಸಾಧನೆಯಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಸಾಧನೆಗಳನ್ನು ರಾಜ್ಯ ಮಟ್ಟದಲ್ಲಿ ಗಮನಿಸಲಾಗಿದೆ. ಇಲ್ಲಿನ ಸಾಧಕರು ದೇಶದಲ್ಲೇ ಜನಮಾನ್ಯರಾಗಿದ್ದಾರೆ ಎಂದ ಸಚಿವರು, ಯುವ ಶಕ್ತಿಯನ್ನು ಸಬಲಗೊಳಿಸಲು ರಾಜ್ಯ ಸರ್ಕಾರ ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಅತ್ಯುತ್ತಮ ಯೋಜನೆಗಳನ್ನು ನೀಡಿದೆ. ಇದರ ಸೌಲಭ್ಯವನ್ನು ಜಿಲ್ಲೆಯ ಯುವ ಶಕ್ತಿ ಸದ್ಬಳಕೆ ಮಾಡಿಕೊಂಡಿದ್ದು, ಕೌಶಲ್ಯಾಭಿವೃದ್ಧಿಯೂ ಇದೇ ಮಾದರಿಯಲ್ಲೇ ಮುಂದುವರಿಯಲಿ ಎಂದು ಹಾರೈಸಿದರು.

ಕಲಿಕೆಯ ಜೊತೆ ಕೌಶಲ್ಯವಿದ್ದರೆ ವ್ಯಕ್ತಿತ್ವ ವಿಕಸನದ ಜೊತೆಗೆ ದೇಶದ ವಿಕಸನವೂ ಸಾಧ್ಯ ಎಂದ ಅವರು, ಇದೇ ಹಿನ್ನಲೆಯಲ್ಲಿ ಉದ್ಯೋಗಮೇಳವನ್ನು ಮೇ 19ರಂದು ಮತ್ತೆ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದರು.

ಕೌಶಲ್ಯಾಭಿವೃದ್ಧಿ ನೋಂದಣಿಗೆ ಮೊದಲ ಹಂತದಲ್ಲಿ ರಾಜ್ಯದಲ್ಲಿ 5 ಲಕ್ಷ ಗುರಿ ಇದ್ದರೆ, ಉಡುಪಿ ಜಿಲ್ಲೆಯಲ್ಲಿ 9100 ಗುರಿ ನಿಗದಿಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಆಧಾರ ನೋಂದಣಿಯನ್ನೂ ಆಧಾರ್ ಇಲ್ಲದವರಿಗೆ ಮಾಡಿಸಲಾಗುವುದು ಎಂದು ಸಚಿವರು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ ಮಹೇಶ್ವರ ರಾವ್ ಅವರು, ತರಬೇತಿಯ ಪ್ರಯೋಜನ ಪಡೆಯುವಂತೆ ಯುವ ನಿರುದ್ಯೋಗಿಗಳಿಗೆ ಕರೆ ನೀಡಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ, 18ರಿಂದ 35 ವರ್ಷದವರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ ಎಂದರು.

ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧನ ಬನ್ನಂಜೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷರಾದ ರಾಜೇಂದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೋಪಿ ನಾಯಕ್, ಉಪಕಾರ್ಯದರ್ಶಿಗಳಾದ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. ಯೋಜನೆಯ ನೋಡಲ್ ಅಧಿಕಾರಿ ನಯನಾ ಸ್ವಾಗತಿಸಿದರು. ಹರಿಕೃಷ್ಣ ಶಿವತ್ತಾಯ ವಂದಿಸಿದರು.


Spread the love

Exit mobile version