ಕ್ರಿಸ್ಮಸ್ ವೇಳೆ ನಡೆದಿರುವುದು ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿ – ಭಾರತೀಯ ಕ್ರೈಸ್ತ ಒಕ್ಕೂಟ
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವ ವ್ಯವಸ್ಥೆಯ ಮೇಲೆ ನಡೆದಿರುವ ಗಂಭೀರ ಹಲ್ಲೆಯಾಗಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸಿದೆ
ಕ್ರಿಸ್ಮಸ್ ಹಬ್ಬ ಕೇವಲ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಒಂದು ಶಾಂತಿ ಹಾಗೂ ಸಂತೋಷ ತರುವ ಹಬ್ಬವಾಗಿದ್ದು ಎಲ್ಲಾ ಧರ್ಮದವರು ಪ್ರೀತಿಯಿಂದ ಹಾಗೂ ಅಭಿಮಾನದಿಂದ ಸಂಭ್ರಮಿಸಲಾಗುತ್ತದೆ. ಆದರೆ ಇದೇ ವೇಳೆ ದೇಶದ ವಿವಿಧ ರಾಜ್ಯಗಳಾದ ಕೇರಳ, ನವದೆಹಲಿ ಉತ್ತರಪ್ರದೇಶ, ರಾಜಸ್ಥಾನ, ಉತ್ತರಕಾಂಡ, ಒರಿಸ್ಸಾ ಸೇರಿದಂತೆ ವಿವಿಧೆಡೆ ಕ್ರಿಸ್ಮಸ್ ಆಚರಣೆಯ ವೇಳೆ ಮತಾಂಧ ವ್ಯಕ್ತಿಗಳು ಹಲ್ಲೆ ನಡೆಸಿದ್ದಲ್ಲದೆ ಹಬ್ಬದ ಸಂಭ್ರಮವನ್ನೇ ಹಾಳುಗೆಡವಿರುವುದು ಸಂವಿಧಾನದ ತತ್ವದಡಿ ನಂಬಿಕೆ ಇಟ್ಟು ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ಅತೀ ಹೆಚ್ಚು ನೋವು ತಂದಿದೆ.
ಒಂದೆಡೆ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಿದ್ದರೆ ಇನ್ನೊಂದೆಡೆ ಮತಾಂಧ ಶಕ್ತಿಗಳು ಸೇರಿಕೊಂಡು ಕ್ರೈಸ್ತ ಸಮುದಾಯದ ಮೇಲೆ ದಾಳಿ ಮಾಡುತ್ತಿರುವುದು ನೋವಿನ ಸಂಗತಿ. ದೇಶದ ಪ್ರಧಾನಿಗಳು ಇಂತಹ ವಿಶಿಷ್ಠ ಸಂಪ್ರದಾಯಕ್ಕೆ ಮುನ್ನುಡಿ ಬರೆದಿರುವುದು ಕ್ರೈಸ್ತ ಸಮುದಾಯ ನಿಜಕ್ಕೂ ಅವರ ಕಾಳಜಿಗೆ ಅಭಿನಂದನೆ ಸಲ್ಲಿಸುತ್ತದೆ. ಅದೇ ವೇಳೆ ಅವರ ಅನುಯಾಯಿಗಳು ಎನಿಸಿಕೊಂಡವರು ದೇಶದಾದ್ಯಂತ ಕ್ರಿಸ್ಮಸ್ ಆಚರಣೆಗಳ ಮೇಲೆ ದಾಳಿ ನಡೆಸಿ ಹಾಳುಗೆಡವಿದ್ದಾರೆ. ದೇಶದಲ್ಲಿ ಕ್ರೈಸ್ತ ಸಂಪ್ರದಾಯಗಳ ಮೇಲಿನ ಇತ್ತೀಚಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಾಗಿ ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಗಳಾಗಿವೆ. ಆರಾಧನ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ 2% ಜನಸಂಖ್ಯೆಯನ್ನು ಹೊಂದಿರುವ ಕ್ರೈಸ್ತ ಸಮುದಾಯದ ಕೊಡುಗೆ 90%ಕ್ಕಿಂತ ಅಧಿಕವಾಗಿದೆ. ಎಲ್ಲಾ ಧರ್ಮ ಜಾತಿಯ ಜನರೊಂದಿಗೆ ಪ್ರೀತಿ ಹಾಗೂ ಸೌಹಾರ್ದತೆಯೊಂದಿಗೆ ಬದುಕುತ್ತಿರುವವರಿಗೆ ಇಂತಹ ಹಲ್ಲೆ ದೌರ್ಜನ್ಯಗಳು ಆತಂಕಕ್ಕೀಡು ಮಾಡುತ್ತಿವೆ. ಈ ವರ್ಷದ ಕ್ರಿಸ್ಮಸ್ ಆಚರಣೆಗೆ ಕ್ರೈಸ್ತ ಬಾಂಧವರ ಮೇಲೆ ನಡೆದ ಹಲ್ಲೆ ದೌರ್ಜನ್ಯಗಳು ಒಂದು ರೀತಿಯ ನೋವಿನ ಬಹುಮಾನ ನೀಡಿದಂತಾಗಿದೆ. ಅಲ್ಪಸಂಖ್ಯಾತರು ದೇಶದ ಆಡಳಿತದಲ್ಲಿ ಇನ್ನೂ ಕೂಡ ಸುಭದ್ರವಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ.
ರಾಜ್ಯದಲ್ಲಿ ಕೂಡ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯಗಳು ಏನೂ ಕೂಡ ಕಡಿಮೆಯಾಗಿಲ್ಲ. ಕಾರ್ಯಕ್ರಮವೊಂದಕ್ಕೆ ಉದ್ದೇಶ ಪೂರಕವಾಗಿ ಪ್ರವೇಶಿಸಿ ಚರ್ಚ್ ಪಾದ್ರಿಗೆ ಸತ್ಯನಿಷ್ಠ ಆರ್ಯ ಎಂಬಾತ ಬೆದರಿಕೆವೊಡ್ಡಿರುವುದು ಮಾತ್ರವಲ್ಲದೆ, ಕ್ರೈಸ್ತ ಹಾಗೂ ಮುಸ್ಲಿಮ್ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಆಗಿ ಮಾತನಾಡಿರುವುದು ಕೂಡ ವರದಿಯಾಗಿದೆ. ಈತನ ವಿರುದ್ದ ಈಗಾಗಲೇ ಪ್ರಕರಣ ದಾಖಲಾಗಿದೆ ಆದರೆ ಇದರಿಂದ ಸಮುದಾಯಕ್ಕೆ ಯಾವುದೇ ರೀತಿಯ ಸ್ಪಷ್ಟ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ರಾಜ್ಯದಲ್ಲಿ ಕೂಡ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು, ಹಾಗೂ ಇತರ ಸಂಸ್ಥೆಗಳ ಮೇಲೆ ಕೂಡ ಮೂಲಭೂತವಾದಿಗಳು ನಿರಂತರ ದಾಳಿ ನಡೆಸುತ್ತಿವೆ.
ದೇಶದ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಇಂತಹ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಪುಂಡರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ ನಿರ್ಭೀತಿಯಿಂದ ಬದುಕುವುದು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ದೇಶದ ಪ್ರಧಾನಿಗಳು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಆಡಳಿತ ನಡೆಸುವ ಸರಕಾರಗಳು ಕ್ರೈಸ್ತ ಸಮುದಾಯಕ್ಕೆ ಸೂಕ್ತ ಭದ್ರತೆ ನೀಡುವಂತೆ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ
