ಗಾಂಜಾ ಸಾಗಾಟ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಬೈಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಸಾಧಿಕ್ ಹಾಗೂ ಅಬ್ದುಲ್ ಮಜೀದ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ರೂ 88,700 ರೂ. ಮೌಲ್ಯದ 8.790 ಕಿಲೋ ಗ್ರಾಂ ಗಾಂಜಾ, 1,00,000 ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು 2,17,460 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅ. 8 ರಂದು ಬೆಳಗ್ಗೆ 11:50 ಗಂಟೆಗೆ ಬಂಟ್ವಾಳ ಪಿಎಸ್‌ಐ ಸಂದೀಪ ಕುಮಾರ ಶೆಟ್ಟಿ ಅವರು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆಯಲ್ಲಿ ಗೂಡಿನಬಳಿಯಲ್ಲಿರುವ ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿದೆ ಬರುತ್ತಿದ್ದ ಇಬ್ಬರಲ್ಲಿ ಬೈಕ್‌ನ್ನು ನಿಲ್ಲಿಸಲು ಸೂಚಿಸಿದಾಗ, ಅವರು ಬೈಕನ್ನು ನಿಲ್ಲಿಸದೆ ಪರಾರಿಯಾದರು. ಆಗ ಅವರನ್ನು ಬೆನ್ನಟ್ಟಿದ ಪೊಲೀಸರು ಕೈಕುಂಜೆ ರೈಲ್ವೇ ಸ್ಟೇಷನ್ ಬಳಿ ಬೈಕನ್ನು ಸುತ್ತುವರಿದು ಆರೋಪಿಗಳನ್ನು ವಶಕ್ಕೆ ತೆಗದುಕೊಂಡು ವಿಚಾರಣೆಗೊಳಪಡಿಸಿದಾಗ ಅವರು ಗಾಂಜಾ ಸಾಗಾಟಕ್ಕೆ ವಿಫಲ ಯತ್ನ ನಡೆಸಿರುವ ಪ್ರಕರಣ ಬೆಳಕಿಗೆ ಬಂತು.
ಬೈಕ್‌ನಲ್ಲಿದ್ದ ಸಹಸವಾರ ಅಬ್ದುಲ್ ಸಾಧಿಕ್ ಹಾಗೂ ಬೈಕ್ ಸವಾರ ಅಬ್ದುಲ್ ಮಜೀದ್ ಈ ಹಿಂದೆ ಪಿಕಪ್ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ಪಿಕ್ ಅಪ್ ನ್ನು ಬೆನ್ನಟ್ಟಿಕೊಂಡು ಬಂದಿದ್ದಾಗ ನಂದಾವರ ಎಂಬಲ್ಲಿ ವಾಹನವನ್ನು ನಿಲ್ಲಿಸಿ ನಿಲ್ಲಿಸಿ ಅಲ್ಲಿಂದ ಗಾಂಜಾದ ಸಮೇತ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಗಾಂಜಾವನ್ನು ಆರೋಪಿ ಅಬ್ದುಲ್ ಸಾಧಿಕ್ ತನ್ನ ಸ್ನೇಹಿತ ಮಜೀದನ ಮನೆಯಲ್ಲಿ ಇಟ್ಟಿದ್ದನು. ಅ.8ರಂದು ಗಾಂಜಾವನ್ನು ಮಾರಾಟ ಮಾಡಲು ಕೊಂಡು ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.