ಗೂಗಲ್ ಮ್ಯಾಪ್‌ನಿಂದ ಗೊಂದಲ : ಚಾಲಕನ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ
ಮೂಡುಬಿದಿರೆ: ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ಇಳಿಜಾರು ತಿರುವಿನಲ್ಲಿ ಗೂಗಲ್ ಮ್ಯಾಪ್ ನಂಬಿ ಬಂದ ಸರಕು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬುಧವಾರ ತಡರಾತ್ರಿ ಸುಮಾರು ಎರಡು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿ ಚಾಲಕ ಹೊಸ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ ಕಡಂದಲೆಯ ಕಡಿದಾದ ಇಳಿಜಾರು ಮತ್ತು ಅಪಾಯಕಾರಿ ತಿರುವಿನಲ್ಲಿ ಗೊಂದಲಕ್ಕೆ ಸಿಲುಕಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ರಾಂಗ್ ಸೈಡಿಗೆ ಬಂದು, ಅಲ್ಲಿನ ಗುಡ್ಡದ ಬುಡಕ್ಕೆ ನಿರ್ಮಿಸಲಾಗಿದ್ದ ಗೋಡೆಗೆ ಬಲವಾಗಿ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಿದೆ.
ಚಾಲಕನು ಘಟನೆ ಬಗ್ಗೆ ಮಾಹಿತಿ ನೀಡಿ, ತಾನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿರುವ ಪೇಪರ್ ಮಿಲ್ ಕಡೆಗೆ ಹೋಗಬೇಕಿತ್ತು. ಆದರೆ, ಗೂಗಲ್ ಮ್ಯಾಪ್ ಮಾರ್ಗದರ್ಶನ ಅನುಸರಿಸಿ ಈ ಹಾದಿಗೆ ಬಂದಿದ್ದೇನೆ ಮತ್ತು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
