ಚಂದ್ರಮೌಳೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ: ಆರೋಪಿ ಬಂಧನ, ₹2,195 ನಗದು ವಶ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ, ಕಳುವಾದ ₹2,195 ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ರವಿಕುಮಾರ್ @ ರವಿ ಎಚ್.ಜಿ. (20) ಎಂದು ಗುರುತಿಸಲಾಗಿದೆ. ಈತ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಪೋಸ್ಟ್ ವ್ಯಾಪ್ತಿಯ ಅಜ್ಜಿಮಡ, ಕುಬೇರಂಗಡಿ, ಸಣ್ಣಪುಲಿಕೊಟ್ಟ ಗ್ರಾಮದ ನಿವಾಸಿಯಾಗಿದ್ದಾನೆ.
ಆಗಸ್ಟ್ 18ರಂದು ಕಳ್ಳತನ:
ಆಗಸ್ಟ್ 18ರಂದು ಮಧ್ಯರಾತ್ರಿ ಚಂದ್ರಮೌಳೇಶ್ವರ ದೇವಸ್ಥಾನದ ಮಾಡಿನ ಮೇಲೆ ಅಳವಡಿಸಿದ್ದ ಜಾಲರಿಯ ಮೂಲಕ ಒಳಪ್ರವೇಶಿಸಿದ ಆರೋಪಿ, ದೇವಸ್ಥಾನದ ಸಿಸಿಟಿವಿ ಕ್ಯಾಮೆರಾವನ್ನು ತಿರುಗಿಸಿ ಬಳಿಕ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಆತನಿಂದ ಕಳುವಾದ ₹2,195 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯ ವಿರುದ್ಧ ಈಗಾಗಲೇ ಪ್ರಕರಣಗಳು
ಬಂಧಿತ ರವಿಕುಮಾರ್ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೆಳಗಿನ ಪ್ರಕರಣಗಳು ದಾಖಲಾಗಿವೆ:
ಅ.ಕ್ರ. 44/2024 – ಕಲಂ 457, 380 ಐಪಿಸಿ
ಅ.ಕ್ರ. 148/2024 – ಕಲಂ 457, 380 ಐಪಿಸಿ
ಅ.ಕ್ರ. 365/2024 – ಕಲಂ 303(2) ಬಿ.ಎನ್.ಎಸ್. ಜೊತೆಗೆ 86 ಕೆ.ಎಫ್. ಆಕ್ಟ್
ಅ.ಕ್ರ. 386/2024 – ಕಲಂ 303(2) ಬಿ.ಎನ್.ಎಸ್. ಜೊತೆಗೆ 86 ಕೆ.ಎಫ್. ಆಕ್ಟ್
ಅ.ಕ್ರ. 354/2024 – ಕಲಂ 331(3), 305 ಬಿ.ಎನ್.ಎಸ್.
