ಚೆಂಬು | ಮನೆಯಿಂದ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಸುಳ್ಯ : ಚೆಂಬು ಗ್ರಾಮದ ಮನೆಯೊಂದರಿಂದ ನಗ-ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳಾದ ಸಿದ್ದಲಿಂಗು ಎನ್. (28) ಮತ್ತು ರಘು ಎನ್. (26) ಬಂಧಿತ ಆರೋಪಿಗಳು.
ಬಂಧಿತರಿಂದ 8,50,000 ರೂ. ನಗದು, 120 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚೆಂಬು ಗ್ರಾಮದ ನಿವಾಸಿ ವೀರಪ್ಪ ಪಿ. ಅವರ ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಅಂದಾಜು 15,000 ರೂ. ನಗದು ಮತ್ತು 120 ಗ್ರಾಂ ತೂಕದ ಚಿನ್ನಾಭರಣಗಳನ್ನು ನ.5ರಂದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಈ ಕುರಿತು ದೂರು ಸ್ವೀಕರಿಸಿದ್ದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
