ಚೇತನಾ ಬಾಲ ವಿಕಾಸ ಮಂದಿರದಲ್ಲಿ ಕುದ್ರೋಳಿ ಗಣೇಶ್ ಅವರಿಂದ ಜಾದೂಗಾರರ ದಿನಾಚರಣೆ
ಮಂಗಳೂರು – ಭಾರತದ ಜಾದೂ ಪಿತಾಮಹ ಪಿ.ಸಿ.ಸೋರ್ಕಾರ್ ರವರ ಜನ್ಮ ದಿನದ ನೆನಪಿಗೆ ಭಾರತದಾದ್ಯಂತ ಆಚರಿಸಲಾಗುವ “ಜಾದೂಗಾರರ ದಿನಾಚರಣೆ”ಯನ್ನು ಮಂಗಳೂರಿನಲ್ಲಿ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರು “ವಿಶಿಷ್ಟರಿಗಾಗಿ ವಿಶೇಷ ಜಾದೂ” ಅನ್ನುವ ಕಾರ್ಯಕ್ರಮದ ಮೂಲಕ ಆಚರಿಸಿಕೊಂಡರು.

ಕುದ್ರೋಳಿ ಗಣೇಶ್ ನಗರದ ಚೇತನಾ ಬಾಲ ವಿಕಾಸ ಮಂದಿರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಜಾದೂ ಪ್ರದರ್ಶನದ ಮೂಲಕ ರಂಜನೆ ಹಾಗೂ ಅಚ್ಚರಿಯನ್ನು ಉಂಟುಮಾಡಿದರು.ಶೂನ್ಯದಿಂದ ಮಂತ್ರದ ಕೋಲು ಪ್ರತ್ಯಕ್ಷವಾಗುವುದು,ಪೇಪರನ್ನು ಹರಿದು ಚೂರು ಮಾಡಿದರೂ ಮತ್ತೇ ಸರಿಯಾಗುವುದು,ಕಿವಿಯಿಂದ ಮೂಗಿನಿಂದ ನಾಣ್ಯ ಬರುವುದು,ಖಾಲಿ ಬಟ್ಟೆಯಿಂದ ಹೂ ಸ್ರಷ್ಟಿಯಾಗುವುದು,ಬಟ್ಟೆಯ ರಿಬ್ಬನ್ ಕಾರಂಜಿಯಂತೆ ಚಿಮ್ಮುವುದು,ಬೆಂಕಿಯಿಂದ ಹತ್ತಾರು ನೋಟು ಸ್ರಷ್ಟಿಯಾಗುವುದು,ನೀರಿವಲ್ಲಿ ಅದ್ದಿದ ಕಾಗದ ಮಂಜಿನ ಚಕ್ಕೆಗಳಂತೆ ಹಾರುವುದು,ಮೂರು ಬಣ್ಣದ ಟವಲ್ ಗಳಿಂದ ತ್ರಿವರ್ಣ ಧ್ವಜವಾಗುವುದು ಮುಂತಾದ ಅದ್ಭುತಗಳನ್ನು ಭಿನ್ನ ಸಾಮರ್ಥದ ಮಕ್ಕಳು ಅತ್ಯಂತ ಸಮೀಪದಿಂದ ನೋಡಿ ಸಂತಸಪಟ್ಟರು.ಕುದ್ರೋಳಿ ಗಣೇಶ್ ರವರು ಜಾದೂ ಮಾಡಿ ಚಾಕ್ ಲೇಟ್ ಸ್ರಷ್ಟಿಸಿದ ಚಾಕ್ ಲೇಟ್ ಸವಿದು ಆನಂದಿಸಿದರು.
ಚೇತನಾ ಬಾಲ ವಿಕಾಸ ಕೇಂದ್ರದಲ್ಲಿರುವ ಸುಮಾರು 100 ವಿಧ್ಯಾರ್ಥಿಗಳಿಗೆ ಅವರ ಮನೋಸ್ಥಿತಿಗೆ ಅನುಗುಣವಾಗಿ ಪ್ರದರ್ಶನನೀಡಿದ ಕುದ್ರೋಳಿ ಗಣೇಶ್ ಪ್ರತಿ ತರಗತಿಗಳಿಗೆ ತೆರಳಿ ಜಾದೂ ನೀಡಿದರು.ಒಟ್ಟು 5 ಪ್ರದರ್ಶನ ನೀಡಲಾಯಿತು.ಜಾದೂವನ್ನು ಸಮಾಜ ಸೇವೆಗಾಗಿ ಬಳಸುವ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಯಿತು ಎಂದು ವಿಸ್ಮಯ ಜಾದೂ ಪ್ರತಿಷ್ಟಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ