ಜನರಿಗೆ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯತಿ ಬೇಡ ಬಿ.ವೈ. ರಾಘವೇಂದ್ರ
ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವಿಷಯದಲ್ಲಿ ಜಟಾಪಟಿಗಳು ತೀವ್ರಗೊಂಡಿರುವ ಸಂದರ್ಭದಲ್ಲಿ, ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಪಷ್ಟನೆ ನೀಡಿದ್ದು, “ಪಟ್ಟಣ ಪಂಚಾಯತ್ ರಚನೆ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದದ್ದು ಸತ್ಯ. ಆದರೆ ಜನರು ಪಟ್ಟಣ ಪಂಚಾಯತ್ ಬೇಡವೆಂದು ಹೇಳಿದರೆ, ಅವರ ಮನಸ್ಸಿಗೆ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಮಾತನಾಡಿದ ಅವರು, “ಒಳ್ಳೆಯ ಉದ್ದೇಶದಿಂದ ಪಟ್ಟಣ ಪಂಚಾಯತ್ ರಚಿಸಲಾಯಿತು. ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಬೈಂದೂರಿನಲ್ಲಿ ಒಂದು ಪಟ್ಟಣ ಕೇಂದ್ರ ಇರಬೇಕು ಎಂಬ ಆಶಯದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಗ್ರಾಮಾಂತರ ಭಾಗದ ಜನರಿಗೆ ಸಮಸ್ಯೆ ಎದುರಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಜನರಿಗೆ ಸಮಾಧಾನ ಇಲ್ಲದಿದ್ದರೆ ಪಟ್ಟಣ ಪಂಚಾಯತಿ ಬೇಡ” ಎಂದರು.
ಅವರ ಪ್ರಕಾರ, ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. “ಬೈಂದೂರಿನಲ್ಲಿ ಬಿಜೆಪಿ ಕಾರ್ಯಕರ್ತರೇ ಶಕ್ತಿ. ಕಾರ್ಯಕರ್ತರೇ ಭವಿಷ್ಯ ಬರೆಯುವವರು. ಕಾಂಗ್ರೆಸ್ ಯಾವುದೇ ನಾಯಕನನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರು ಬುದ್ಧಿವಂತರಾಗಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಮಾಜಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಗಳ ನಡುವೆ ನಡೆದ ವಾಗ್ವಾದದ ಕುರಿತು ಪ್ರತಿಕ್ರಿಯಿಸಿದ ಸಂಸದರು, “ದೀಪಕ್ ಕುಮಾರ್ ಶೆಟ್ಟಿ ಯಶಸ್ವಿ ತಾಲೂಕು ಅಧ್ಯಕ್ಷರಾಗಿದ್ದರು. ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಮನಸ್ಸಿನಲ್ಲಿ ಬೇರೆ ಆಲೋಚನೆಗಳು ಇರುವುದಿಲ್ಲವೆಂದು ನಂಬಿದ್ದೇನೆ” ಎಂದರು.