ಜಲಪಾತದಲ್ಲಿ ಯುವತಿಯರೊಂದಿಗೆ ಅನುಚಿತ ವರ್ತನೆ ಆರೋಪ: ಮೂವರ ಬಂಧನ
ಬೆಳ್ತಂಗಡಿ: ದಿಡುಪೆ ಜಲಪಾತದಲ್ಲಿ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಝಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಆರೋಪಿಗಳಾಗಿದ್ದಾರೆ.
ಈ ಮೂವರು ಯುವಕರೊಂದಿಗೆ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಯುವತಿಯರು ಬುಧವಾರ ದಿಡುಪೆ ಜಲಪಾತಕ್ಕೆ ಆಗಮಿಸಿದ್ದರು. ಈ ವೇಳೆ ಮೂವರು ಯುವಕರು ತಮ್ಮೊಂದಿಗಿದ್ದ ಯುವತಿಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆನ್ನಲಾಗಿದೆ. ಪ್ರತಿರೋಧಿಸಿದ ಯುವತಿಯರು ಬೊಬ್ಬೆ ಹಾಕಿದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಮೂವರು ಯುವಕರನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅವರು ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
