ಜಲ ಜೀವನ್ ಮಿಷನ್ ಕಾಮಗಾರಿಗಳ ಕರ್ಮಕಾಂಡದ ಬಗ್ಗೆ ಶಾಸಕರುಗಳು ಮೌನ ಮುರಿಯಲಿ: ವಿಕಾಸ್ ಹೆಗ್ಡೆ
ಕುಂದಾಪುರ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟದ ಪೈಪ್ ಗಳ ಬಳಕೆ, ನೀರಿನ ಮೂಲ ಇಲ್ಲದೇ ಇರುವುದು, ಮನಬಂದಂತೆ ರಸ್ತೆಗಳ ಇಕ್ಕೆಲಗಳನ್ನು ಅಗೆದು ಹಾಕುತ್ತಿರುವುದು, ಗುತ್ತಿಗೆದಾರರು ಹಾಗೂ ಇಲಾಖಾ ಅಭಿಯಂತರರುಗಳು ಶಾಮೀಲಾಗಿರುವ ಕುರಿತು ಕುಂದಾಪುರ ಹಾಗೂ ಬೈಂದೂರು ಶಾಸಕರುಗಳು ಇಲ್ಲಿಯ ತನಕ ಮೌನ ಮುರಿಯದೆ ಇರಲು ಕಾರಣವೇನು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.
ನೀರಿನ ಮೂಲಗಳನ್ನೇ ಗುರುತಿಸದೆ ಮನೆಗಳ ಮುಂಬಾಗ ನಳ್ಳಿ ಅಳವಡಿಸಿರುವುದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ, ಇದರ ಬಗ್ಗೆ ಧ್ವನಿ ಎತ್ತ ಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರುಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನ ಕಾರಣವಾಗಿದೆ. ಶಾಸಕರುಗಳು ಇನ್ನಾದರೂ ಮೌನ ಮುರಿದು ಹಗಲು ದರೋಡೆಯಾಗಿರುವ ಜೆ ಜೆ ಎಂ ಕಾಮಗಾರಿಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರವನ್ನು ಒತ್ತಾಯಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
