ಜಾತಿ ಸಮೀಕ್ಷೆ ವೇಳೆ ಕ್ರೈಸ್ತರಲ್ಲಿ ಗೊಂದಲ ಬೇಡ – ಐವನ್ ಡಿಸೋಜಾ
ಮಂಗಳೂರು: ರಾಜ್ಯದಲ್ಲಿ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಕ್ರೈಸ್ತರು ತಮ್ಮ ಧರ್ಮವನ್ನು ನಮೂದಿಸುವ ವೇಳೆ ಯಾವುದೇ ಗೊಂದಲಕ್ಕೀಡಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕರೆ ನೀಡಿದರು.
ಸೋಮವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಸಮೀಕ್ಷಾ ಪ್ರಶ್ನಾವಳಿಯ 8ನೇ ಕಾಲಂನಲ್ಲಿ ಕ್ರೈಸ್ತರು ತಮ್ಮ ಧರ್ಮವನ್ನು ಸ್ಪಷ್ಟವಾಗಿ ‘ಕ್ರೈಸ್ತರು’ ಎಂದು ನಮೂದಿಸಬೇಕು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಎಲ್ಲರೂ ಕ್ರೈಸ್ತರೇ. ಉಪಜಾತಿಗಳನ್ನು ನಮೂದಿಸುವುದು ಬಾಧ್ಯತೆಯಲ್ಲ; ಅದು ವ್ಯಕ್ತಿಗಳ ಆಯ್ಕೆಗೆ ಬಿಟ್ಟದ್ದು. ಆದರೆ ಧರ್ಮದ ಗುರುತು ಸ್ಪಷ್ಟವಾಗಿರಬೇಕು,” ಎಂದರು.
ದಲಿತ ಕ್ರೈಸ್ತರನ್ನು ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಮಾನ್ಯತೆ ನೀಡಿರುವುದನ್ನು ಉಲ್ಲೇಖಿಸಿದರು. ಪ್ರಸ್ತುತ ಕ್ರೈಸ್ತರು 3ಬಿ ವರ್ಗಕ್ಕೆ ಸೇರಿದರೂ, ಸಮೀಕ್ಷೆ ಬಳಿಕ ಅವರನ್ನು ಪ್ರತ್ಯೇಕ ವರ್ಗದಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇದರಿಂದ ಸಮುದಾಯಕ್ಕೆ ಮೀಸಲಾತಿ ಸಂಬಂಧಿತ ಪ್ರಯೋಜನಗಳು ದೊರೆಯಲಿವೆ ಎಂದು ತಿಳಿಸಿದರು.
ಐವನ್ ಡಿಸೋಜಾ ಸಮೀಕ್ಷೆಯ ಉದ್ದೇಶವನ್ನು ವಿವರಿಸಿ, “ಇದು ರಾಜಕೀಯದ ಸಾಧನವಲ್ಲ. ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ಒದಗಿಸುವ ಮಹತ್ವದ ಕಾರ್ಯ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದ್ದು, ಸರ್ಕಾರ ಈಗಾಗಲೇ 60 ಅಂಶಗಳ ಪ್ರಶ್ನಾವಳಿಯೊಂದಿಗೆ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು,” ಎಂದರು.
10 ವರ್ಷಗಳ ಹಿಂದೆ ನಡೆದ ಸಮೀಕ್ಷೆಯ ಮಾಹಿತಿ ಸಮರ್ಪಕವಾಗಿರಲಿಲ್ಲವೆಂಬ ಅಸಮಾಧಾನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.
ಈ ಸಂದರ್ಭ ಸಂತೋಷ್ ಡಿಸೋಜಾ, ಕೆಥೋಲಿಕ್ ಸಭಾದ ಕಾರ್ಯದರ್ಶಿ ವಿಲ್ಮಾ ಮೊಂತೆರೊ, ಸೌಹಾರ್ದ ಸಮಿತಿಯ ಸಂಚಾಲಕ ಅರುಣ್ ಡಿಸೋಜಾ, ಮೀನಾ ಟೆಲ್ಲಿಸ್, ಸತೀಶ್ ಪೆಂಗಾಲ್, ಮನುರಾಜ್, ಭಾಸ್ಕರ್ ರಾವ್, ಸ್ಟ್ಯಾನಿ ಲೋಬೊ, ಚಂದ್ರಹಾಸ್ ಪೂಜಾರಿ ಹಾಗೂ ಇಮ್ರಾನ್ ಹಾಜರಿದ್ದರು.