ಜಿಎಸ್‌ಟಿ ಇಳಿಕೆ ಅಭಿಯಾನ ಬಿಜೆಪಿಯ ನಾಟಕ; 8 ವರ್ಷಗಳಲ್ಲಿ ಕೊಳ್ಳೆಹೊಡೆದ ಹಣ ಎಲ್ಲಿದೆ: ಮಂಜುನಾಥ ಭಂಡಾರಿ ಪ್ರಶ್ನೆ
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಅವೈಜ್ಞಾನಿಕ ಜಿಎಸ್‌ಟಿಯನ್ನು ಇದೀಗ ಇಳಿಕೆ ಮಾಡಿರುವ ಬಗ್ಗೆ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಬಿಹಾರ ಚುನಾವಣೆಗಾಗಿನ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳ ಅವಧಿಯಲ್ಲಿ ಭಾರೀ ಪ್ರಮಾಣದ ಜಿಎಸ್‌ಟಿ ಮೂಲಕ ದೇಶದ ಶೇ. 70ರಷ್ಟು ಬಡವರಿಂದ ಜಿಎಸ್‌ಟಿ ಹೆಸರಿನಲ್ಲಿ ಕೊಳ್ಳೆ ಹೊಡೆದಿರುವ ಹಣವನ್ನು ಏನು ಮಾಡಲಾಗಿದೆ ? ಅವೈಜ್ಞಾನಿಕ ಜಿಎಸ್‌ಟಿ ಜಾರಿಗೆ ಆ ಸಂದರ್ಭ ಸಲಹೆ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.
2017ರಲ್ಲಿ ಜಿಎಸ್‌ಟಿ ಜಾರಿಗೊಳಿಸಿದಾಗ ಇಡೀ ವಿಶ್ವದಲ್ಲಿಯೇ ಇಂತಹ ಜಿಎಸ್‌ಟಿಯನ್ನು ನಾವುಜಾರಿಗೆ ತಂದಿದ್ದು ಎಂದು ಸಂಭ್ರಮಿಸಿದವರು ಇಂದು ಇಳಿಕೆಗೂ ಅಭಿಯಾನ ನಡೆಸುತ್ತಿರುವುದು ನಾಟಕ ಎಂಬುದು ಸ್ಪಷ್ಟವಾಗುತ್ತಿದೆ. ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಸರಳೀಕೃತ ಜಿಎಸ್‌ಟಿ ತರಬೇಕು ಎಂದಾಗ ಅದನ್ನು ಬಿಜೆಪಿ ವಿರೋಧಿಸಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಬಿಜೆಪಿ ಜಿಎಸ್‌ಟಿಯನ್ನು ಸಂಪೂರ್ಣವಾಗಿ ವಿರೋಧಿಸಿತ್ತು. ಬಳಿಕ 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ಕಾಂಗ್ರೆಸ್ ಇದು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಉದ್ದೇಶಿಸಿದ್ದ ಜಿಎಸ್‌ಟಿ ಅಲ್ಲ. ಇದು ಬಡವರ ಮೇಲಿನ ಪ್ರಹಾರ. ಗಬ್ಬರ್ ಸಿಂಗ್ ಟ್ಯಾಕ್ಸ್ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಳೆದ ಎಂಟು ವರ್ಷಗಳಿಂದ ರಾಷ್ಟ್ರದ ಉದ್ದಗಲದ್ದಿ ಹೇಳುತ್ತಾ ಬಂದರು. ವಿಶ್ವದ ವಿಶ್ವವಿದ್ಯಾನಿಲಯಗಳಲ್ಲಿ ಇದರ ಬಗ್ಗೆ ವಿಶ್ಲೇಷಿಸಿದಾಗ ಅವರನ್ನು ಭಾರತ ವಿರೋಧಿ ಎನ್ನಲಾಯಿತು. ಆದರೆ ಇದೀಗ ಇಳಿಕೆ ಮಾಡಿ ಸಂಭ್ರಮಿಸುವ ಬಿಜೆಪಿಗೆ ಇದು ನಾಚಿಕೆಗೇಡವಲ್ಲವೇ, ಈ ಬಗ್ಗೆ ಬಿಜೆಪಿಯವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದವರು ಹೇಳಿದರು.
ನನ್ನ ಕಾಲೇಜಿನ ಹಾಸ್ಟೆಲ್‌ಗಾಗಿ ಜಿಎಸ್‌ಟಿಯಡಿ 2 ಕೋಟಿ ರೂ. ಪಾವತಿಸಲಾಗಿದೆ. ಈಗ ಅದನ್ನು ಕೇಂದ್ರ ಸರಕಾರ ನಮಗೆ ಮರು ಪಾವತಿಸಲಿದೆಯೇ ಎಂದು ಪ್ರಶ್ನಿಸಿದ ಅವರು, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ನಡೆಸಲಾಗುವ ಇಲೆಕ್ಟ್ರಾನಿಕ್ಸ್ ಸೇರಿದಂತೆ ಇತರ ಕಂಪನಿಗಳು ಶೇ. 80ರಷ್ಟು ಕಚ್ಚಾವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿವೆ. ಹಾಗಾದರೆ 12 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾದಡಿ ಮಾಡಿದ್ದು ಏನು ಎಂಬ ಬಗ್ಗೆ ಉತ್ತರ ಸಿಗಬೇಕಾಗಿದೆ ಎಂದರು.
ಜಿಎಸ್‌ಟಿ ಇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದ ತೆರಿಗೆ ಎಂದು ಜಿಎಸ್‌ಟಿಯ ಇಳಿಕೆ ಬಗ್ಗೆ ಬಿಜೆಪಿಯ ಅಂಧ ಭಕ್ತರು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೇ ನಾವು ವಾಟ್ಸಾಪ್ ಯುನಿವರ್ಸಿಟಿಯ ಅಂಧಭಕ್ತರು ಎನ್ನುವುದು. 2017ರಲ್ಲಿ ಯಾರ ಸರಕಾರ ಜಿಎಸ್‌ಟಿ ಜಾರಿಗೆ ತಂದಿದ್ದು ಎಂಬುದೇ ಅವರಿಗೆ ಅರಿವಿಲ್ಲ ಎಂದವರು ಹೇಳಿದರು.