ಜೋಕಟ್ಟೆ ಕೊಲೆ ಪ್ರಕರಣ ಭೇದಿಸಿದ ಪಣಂಬೂರು ಪೊಲೀಸರು; ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಜೋಕಟ್ಟೆ ಅರಿಕೆರೆ ಪ್ರದೇಶದಲ್ಲಿ ಕುತ್ತಿಗೆ ಕೊಯ್ದು ಹತ್ಯೆಗೀಡಾಗಿದ್ದ ವ್ಯಕ್ತಿಯ ಪ್ರಕರಣವನ್ನು ಪಣಂಬೂರು ಪೊಲೀಸರು ಕ್ಷಿಪ್ರವಾಗಿ ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 10ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಬಳಿಯ ಎಂಎಸ್ಇಝೆಡ್ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಕಿಶೋರ್ ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026, ಕಲಂ 103(1) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ (36), ತಂದೆ ನರ್ಶ್ ಭಂಡಾರಿ, ಮೂಲ ನಿವಾಸಿ ಬಿಹಾರದ ದರ್ಬಾಂಗಾ ಜಿಲ್ಲೆಯ ಶಿವಾಜಿನಗರ, ಪ್ರಸ್ತುತ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಸಮೀಪ ವಾಸವಾಗಿದ್ದವನನ್ನು ಜೂನ್ 13ರಂದು ಮುಂಜಾನೆ ಗೋವಾ ರಾಜ್ಯದ ಮಡಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಿದರು.
ಇನ್ನೋರ್ವ ಆರೋಪಿ ಪಿಂಕೂ ಮಹ್ತೋ (33), ತಂದೆ ಶಿವ್ ಮಹ್ತೋ, ಮೂಲ ನಿವಾಸಿ ಬಿಹಾರದ ವೈಶಾಲಿ ಜಿಲ್ಲೆ, ಪ್ರಸ್ತುತ ಜೋಕಟ್ಟೆ ನಿವಾಸಿಯಾಗಿರುವವನನ್ನು ಅದೇ ದಿನ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಸಮೀಪ ಬಂಧಿಸಲಾಯಿತು.
ತನಿಖೆ ವೇಳೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಚಂದನ್ ಚೌಹಾನ್ (39), ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮಾಹಿತಿಯಂತೆ, ಆರೋಪಿ ಪ್ರಶಾಂತ್ ಕುಮಾರ್ನ ಪತ್ನಿ ಕಳೆದ ಏಪ್ರಿಲ್ ತಿಂಗಳಲ್ಲಿ ಮತ್ತೊಬ್ಬ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದು, ಆಕೆಗೆ ಸಹಾಯ ಮಾಡಿದ ವ್ಯಕ್ತಿಗಳಲ್ಲಿ ಚಂದನ್ ಚೌಹಾನ್ ಕೂಡ ಇದ್ದನೆಂದು ಆರೋಪಿಸಲಾಗಿತ್ತು. ಅಲ್ಲದೆ, ಪ್ರಶಾಂತ್ ಕುಮಾರ್ ಕುರಿತು ಚಂದನ್ ಅಪಪ್ರಚಾರ ನಡೆಸುತ್ತಿದ್ದಾನೆ ಎಂಬ ಅನುಮಾನದಿಂದ ಸಿಟ್ಟಿಗೆದ್ದ ಪ್ರಶಾಂತ್ ತನ್ನ ಸ್ನೇಹಿತ ಪಿಂಕೂ ಮಹ್ತೋನೊಂದಿಗೆ ಸೇರಿ ಜೂನ್ 9ರಂದು ಸಂಜೆ 6 ಗಂಟೆ ಸುಮಾರಿಗೆ ಚಂದನ್ನ ತಲೆ ಹಾಗೂ ಮುಖಕ್ಕೆ ದೊಣ್ಣೆಯಿಂದ ಹಲ್ಲೆ ನಡೆಸಿ, ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೈದಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.
ಹತ್ಯೆಯ ಬಳಿಕ ಮೃತದೇಹವನ್ನು ಜೋಕಟ್ಟೆಯಲ್ಲಿರುವ ತನ್ನ ಬಾಡಿಗೆ ಮನೆಯ ಪಕ್ಕದ ತೋಡಿಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕೀರೇಶ್, ರಾಕೇಶ್ ಮತ್ತು ಮಂಜುನಾಥ್ ಭಾಗವಹಿಸಿದ್ದರು.
