ಜ.11 ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ‘ಉಡುಪಿ ಫುಲ್ ಮ್ಯಾರಥಾನ್’
ಮಣಿಪಾಲ: ಉಡುಪಿ ಜಿಲ್ಲಾಡಳಿತ ಇದೇ ಮೊದಲ ಬಾರಿ ಮ್ಯಾರಥಾನ್ ಸ್ಪರ್ಧೆಯನ್ನು ಸಂಘಟಿಸಲು ಮುಂದಾಗಿದ್ದು, ಇದು ಮುಂದೆ ಪ್ರತಿವರ್ಷ ನಿರ್ದಿಷ್ಟ ದಿನದಂದು ನಡೆಯುವಂತೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಬೆಂಗಳೂರಿನ ಕ್ರೀಡಾ ಸಂಘಟಕ ಸಂಸ್ಥೆ ಎನ್ಇಬಿಯ ಸಹಯೋಗದೊಂದಿಗೆ ಈ ಫುಲ್ ಮ್ಯಾರಥಾನ್ ಮುಂದಿನ ವರ್ಷದ ಜನವರಿ 11ರ ರವಿವಾರ ನಡೆಯಲಿದೆ. ಮುಂದೆ ಪ್ರತಿವರ್ಷ ಜನವರಿ ತಿಂಗಳ ಎರಡನೇ ರವಿವಾರದಂದು ಇದು ನಡೆಯಲಿದೆ ಎಂದವರು ಅವರು ಹೇಳಿದರು.
‘ಉಡುಪಿ ಫುಲ್ ಮ್ಯಾರಥಾನ್’ ಎಂದು ಕರೆಯಲಾಗುವ ಈ ಸ್ಪರ್ಧೆಯಲ್ಲಿ 42.195ಕಿ.ಮೀ.ನ ಫುಲ್ ಮ್ಯಾರಥಾನ್, 21.097 ಕಿ.ಮೀ.ನ ಹಾಫ್ ಮ್ಯಾರಥಾನ್, 10ಕಿ.ಮೀ. ಹಾಗೂ 5ಕಿ.ಮೀ.ನ ಮ್ಯಾರಥಾನ್ ಸ್ಪರ್ಧೆಗಳು ನಡೆಯಲಿದ್ದು, ಎಲ್ಲಾ ವಯೋಮಾನದ, ದೈಹಿಕವಾಗಿ ಸಮರ್ಥರಿರುವ ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸಬಹುದು ಎಂದರು.
ಜಿಲ್ಲಾಡಳಿತದ ವತಿಯಿಂದ ಈ ಮ್ಯಾರಥಾನ್ ನಡೆಯಲಿದೆ. ದೇಶದ ಪ್ರಮುಖ ಕ್ರೀಡಾ ಸಂಘಟಕ ಸಂಸ್ಥೆ ಎನ್ಇಬಿ ಸ್ಪೋರ್ಟ್ಸ್ ಸ್ಪರ್ಧೆಯನ್ನು ಸಂಘಟಿಸಲಿದೆ ಎಂದ ಜಿಲ್ಲಾದಿಕಾರಿಗಳು, ಉಡುಪಿ ಫುಲ್ ಮ್ಯಾರಥಾನ್ನ ಲೋಗೊವನ್ನು ಬಿಡುಗಡೆಗೊಳಿಸಿದರು.
ಎನ್ಇಬಿಯ ಸ್ಪರ್ಧಾ ನಿರ್ದೇಶಕ ನಾಗರಾಜ್ ಅಡಿಗ ಮಾತನಾಡಿ, ತಮ್ಮ ಸಂಸ್ಥೆ ದೇಶದ 22 ನಗರಗಳಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿ ಸುತ್ತಿದೆ. ತನ್ನ ಹುಟ್ಟೂರಿನಲ್ಲಿ ಇದೇ ಮೊದಲ ಬಾರಿ ಸ್ಪರ್ಧೆಯನ್ನು ಸಂಘಟಿಸುವ ಅವಕಾಶ ಸಿಕ್ಕಿದೆ ಎಂದರಲ್ಲದೇ ಮೊದಲ ವರ್ಷದ ಮ್ಯಾರಥಾನ್ನಲ್ಲಿ 6ರಿಂದ 7ಸಾವಿರ ಮಂದಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ವರ್ಷಗಳಲ್ಲಿ ಕನಿಷ್ಠ 10ಸಾವಿರ ಮಂದಿ ಪಾಲ್ಗೊಳ್ಳುವಂತೆ ನೋಡಲಾಗುವುದು. ತಮ್ಮ ಸಂಸ್ಥೆ ಈ ಮ್ಯಾರಥಾನ್ನ್ನು ಸಂಪೂರ್ಣವಾಗಿ ವೃತ್ತಿಪರವಾಗಿ ಸಂಘಟಿಸಲಿದೆ ಎಂದರು.
ಮುಂದಿನ ಜ.11ರಂದು ನಡೆಯುವ ಮೊದಲ ಫುಲ್ ಮ್ಯಾರಥಾನ್ನಲ್ಲಿ ಒಟ್ಟು 10 ಲಕ್ಷ ರೂ. ಬಹುಮಾನವಿದ್ದು, ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆಯುವ ಪುರುಷ ಅಥವಾ ಮಹಿಳಾ ಮ್ಯಾರಥಾನ್ಪಟುವಿಗೆ 2.5 ಲಕ್ಷ ರೂ. ಬಂಪರ್ ಬಹುಮಾನ ಮೊತ್ತವನ್ನು ನೀಡಲಾಗುವುದು ಎಂದರು.
ಮ್ಯಾರಥಾನ್ನಲ್ಲಿ ಮುಕ್ತ, 18ರಿಂದ 35ವರ್ಷ, 35ರಿಂದ 45ವರ್ಷ, 45ರಿಂದ 55ವರ್ಷ ಹಾಗೂ 55+ ವರ್ಷದವರಿಗೆ ಪ್ರತ್ಯೇಕ ವಿಭಾಗಗಳಿವೆ. ಫುಲ್ ಮ್ಯಾರಥಾನ್ ಗೆಲ್ಲುವ ಪುರುಷ ಮತ್ತು ಮಹಿಳಾ ಅತ್ಲೀಟ್ಗೆ 20,000 ರೂ.ನಗದು ಬಹುಮಾನವಿದೆ. ಹಾಫ್ ಮ್ಯಾರಥಾನ್ ವಿಜೇತರಿಗೆ 10ಸಾವಿರ ಹಾಗೂ 10ಕಿ.ಮೀ. ವಿಜೇತರಿಗೆ 5,000ರೂ. ನಗದು ಬಹುಮಾನವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಎಡಿಸಿ ಅಬಿದ್ ಗದ್ಯಾಳ್, ಉಡುಪಿ ಜಿಲ್ಲಾ ಅಮೆಚೂರ್ ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್ಕುಮಾರ್ ಶೆಟ್ಟಿ ಮುಂತಾದವರಿದ್ದರು.
