ಜ. 17,18ರಂದು ತಣ್ಣೀರುಬಾವಿ ಬೀಚ್ನಲ್ಲಿ ಗಾಳಿಪಟ ಉತ್ಸವ, 15 ದೇಶಗಳ 30 ಅಂತಾರಾಷ್ಟ್ರೀಯ ಪಟುಗಳ ಆಗಮನ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ತಣ್ಣೀರು ಬಾವಿ ಬ್ಲೂ ಬೇ ಬೀಚ್ಲ್ಲಿ 9ನೇ ಅವೃತ್ತಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ. 17 ಮತ್ತು 18ರಂದು ನಡೆಯಲಿದೆ. ಸಂಜೆ 3 ಗಂಟೆಗೆ ಆರಂಭವಾಗುವ ಉತ್ಸವದಲ್ಲಿ ಭಾಗವಹಿಸಲು 15 ದೇಶಗಳ 30 ಅಂತರಾಷ್ಟ್ರೀಯ ಗಾಳಿಪಟುಗಳು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ.
ಭಾರತ ಮತ್ತು ವಿದೇಶಗಳಿಂದ ಸೇರಿ ಒಟ್ಟು 62 ನುರಿತ ಗಾಳಿಪಟ ಹಾರಾಟಗಾರರು ತಮ್ಮ ವೈವಿಧ್ಯಮಯ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೊರ ದೇಶಗಳಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಗಾರನ್ನು ಸ್ವಾಗತಿಸಿದ ಅವರು, ಉತ್ಸವದಲ್ಲಿ ಸಾಂಪ್ರದಾಯಿಕ, ಏರೋಫಾಯಿಲ್, ಇನ್ಪ್ಲೇಟಬಲ್ ಹಾಗೂ ಕ್ವಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳ ಪ್ರದರ್ಶನ ಇರಲಿದೆ ಎಂದರು.
ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿರುವ ಟೀಮ್ ಮಂಗಳೂರು ತಂಡದಿಂದ ಸಾಂಸ್ಕೃತಿಕ ಗಾಳಿಪಟಗಳ ಜತೆಗೆ ವಿಶೇಷವಾಗಿ ತುಳುನಾಡಿನ ಸಾಂಸ್ಕೃತಿಕ ವೈಭವ ಪ್ರತಿಬಿಂಬಿಸುವ ರಥ ಎಂಬ ಹೊಸ ಗಾಳಿಪಟವನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಮಾತನಾಡಿ, ಬೀಚ್ನ 2 ಕಿ.ಮೀ. ಅಂತರದಲ್ಲಿ 10 ಕಡೆ 1900 ಕಾರುಗಳಿಗೆ ಹಾಗೂ ನಾಲ್ಕು ಕಡೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್ ಬತ್ತೇರಿಯಿಂದ ಫಲ್ಗುಣಿ ನದಿ ಮೂಲಕ ಫೆರಿ ಸೇವೆಯ ಸೌಲಭ್ಯ ಪಡೆದು ತಣ್ಣೀರುಬಾವಿ ಬೀಚ್ಗೆ ಆಗಮಿಸಬಹುದು. ಕೆಐಒಸಿಎಲ್ ವೃತ್ತದಿಂದ ಬ್ಲೂಬೇ ಬೀಚ್ಗೆ ಬಸ್ ಮೂಲಕ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಇರಲಿದೆ ಎಂದು ಅವರು ಹೇಳಿದರು.
1995ರಲ್ಲಿ ಸ್ಥಾಪಿತವಾದ ಟೀಮ್ ಮಂಗಳೂರು ಗಾಳಿಪಟ ಹಾರಾಟವನ್ನು ಕಲೆಯಾಗಿ ರೂಪಿಸಿಕೊಂಡು ಬಂದಿದೆ. ಎಂಆರ್ಪಿಎಲ್, ಒಎನ್ಜಿಸಿ ಮತ್ತು ಇತರ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ ಜಿಲ್ಲಾಡಳಿತದ ಸಹಕಾರ ದೊಂದಿಗೆ ಗಾಳಿಪಟ ಉತ್ಸವ ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ ಎಂದು ಟೀಮ್ ಮಂಗಳೂರು ತಂಡದ ಪ್ರಾಣ್, ಪ್ರಶಾಂತ್, ದಿನೇಶ್ ಹೊಳ್ಳ ಹಾಗೂ ಇತರರು ಮಾಹಿತಿ ನೀಡಿದರು.
