ಡಯಾಲಿಸಿಸ್ ವ್ಯವಸ್ಥೆಯನ್ನು ನಿರ್ವಹಿಸದ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕಲಾಗುತ್ತಿದೆ – ದಿನೇಶ್ ಗುಂಡೂರಾವ್
ಮಂಗಳೂರು: ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆಯಲ್ಲಿ ಗೊಂದಲ ವಿಚಾರದಲ್ಲಿ ಮಾತನಾಡಿದ ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹಿಂದಿನ ಸರ್ಕಾರ ಎರಡು ಏಜೆನ್ಸಿಗೆ ಡಯಾಲಿಸಿಸ್ ವ್ಯವಸ್ಥೆಯನ್ನು ನಿರ್ವಹಿಸಲು ನೀಡಿತ್ತು. ಅದರಲ್ಲಿ ಒಬ್ಬರು ಅರ್ಧದಲ್ಲೇ ಬಿಟ್ಟಿದ್ದರು. ಈ ಏಜೆನ್ಸಿ ನಿರ್ವಹಣೆ ಸರಿಯಿರಲಿಲ್ಲ. ಸಿಬ್ಬಂದಿಗೆ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಅವರ ಇಎಸ್ಸೈ, ಪಿಎಫ್ ಕಟ್ಟಿರಲಿಲ್ಲ. ಇದನ್ನು ರಾಜ್ಯ ಸರ್ಕಾರ ಕಟ್ಟಲು ನೋಡುತ್ತಿದೆ. ಆದರೆ ಅದಕ್ಕೆ ಮೊದಲು ಆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕುವ ಕೆಲಸ ಆಗುತ್ತಿದೆ ಎಂದರು.
ಇದರೊಂದಿಗೆ ನಾಲ್ಕು ವಿಭಾಗದಲ್ಲಿ ಹೊಸ ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ಡಯಾಲಿಸ್ ಮೆಷಿನ್ ಕೆಟ್ಟು ಹೋದ ಕಡೆ ಅದನ್ನು ಬದಲಾಯಿಸಲು ಆಗ್ತಿಲ್ಲ. ಅದನ್ನು ಈಗಿರುವ ಏಜೆನ್ಸಿ ಮಾಡಬೇಕು. ಇಲ್ಲದಿದ್ದಲ್ಲಿ ಹೊಸ ಏಜೆನ್ಸಿ ಬಂದ ಬಳಿಕ ಮಾಡಬೇಕು. ಯಾವುದೂ ಆಗದಿದ್ದಲ್ಲಿ ಸರ್ಕಾರವೇ ನಿರ್ವಹಣೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಸರ್ಕಾರವೇ ಹೊಸ ಮೆಷಿನ್ ಖರೀದಿಸಿ ನಿರ್ವಹಣೆ ಮಾಡಲು ಚಿಂತಿಸಿದೆ. ಟೆಂಡರ್ ಪ್ರಕ್ರಿಯೆ ಮುಗಿಯಲಿ, ಆ ಬಳಿಕ ನಿರ್ಧಾರ ಮಾಡೋಣ. ಡಯಾಲಿಸಸ್ ಸಿಬ್ಬಂದಿಯ ಬಗ್ಗೆ ನಮಗೆ ಕಾಳಜಿಯಿದೆ. ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದರು.
ಭ್ರೂಣ ಹತ್ಯೆ ಕೇಸ್ ಆರೋಪವಿದ್ದ ವೈದ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಭ್ರೂಣ ಹತ್ಯೆ ಸಂಬಂಧ ತಾನು ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇನೆ. ಈ ಪ್ರಕರಣವನ್ನು ಸಿಐಡಿ ತನಿಖೆ ಕೊಡಲು ಸಿಎಂಗೆ ಮನವಿ ಮಾಡಿದ್ದೇನೆ. ಬಳಿಕ ಸಿಐಡಿ ತನಿಖೆ ಆಗಬೇಕೆಂದು ಸಿಎಂ ಆದೇಶ ಮಾಡಿದ್ದಾರೆ. ಲೋಪವಿದ್ದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ಅಮಾನತು ಆಗಿದೆ. ಆತ್ಮಹತ್ಯೆ ಮಾಡಿರುವ ಆಯುಷ್ ಅಧಿಕಾರಿ ಡಾ.ಸತೀಶ್ ಅವರು ಇದರಲ್ಲಿ ಶಾಮೀಲಾಗಿದ್ದಾರೆಂಬ ಬಗ್ಗೆಯೂ ಮಾಹಿತಿ ಬಂದಿದೆ. ಆದರೆ ಯಾಕೆ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ಪ್ರಕರಣಕ್ಕೂ ಸತೀಶ್ ಆತ್ಮಹತ್ಯೆಗೂ ಲಿಂಕ್ ಇದೆಯೇ ನೋಡಬೇಕು. ಇವರ ಮೇಲೆ ಸಾಕಷ್ಟು ಆರೋಪ ಇದೆ. ನಮ್ಮ ಇಲಾಖೆಯ ಅನೇಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಅದೆಲ್ಲ ತನಿಖೆಯಲ್ಲಿ ಗೊತ್ತಾಗಬೇಕು. ಪೊಲೀಸರು ತನಿಖೆ ನಡೆಸುತ್ತಾರೆ. ಆದ್ದರಿಂದ ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು