Home Mangalorean News Kannada News ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಹಲವೆಡೆ ರಸ್ತೆತಡೆ

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಹಲವೆಡೆ ರಸ್ತೆತಡೆ

Spread the love

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಹಲವೆಡೆ ರಸ್ತೆತಡೆ

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ರಾಜ್ಯದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಮೌರ್ಯ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿಯೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸುರಿಯುತ್ತಿರುವ ಮಳೆಯಲ್ಲೇ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿದ ವೇಳೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಹರೀಶ್ ಕುಮಾರ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಸನದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಪ್ರತಿಭಟನೆ ನಡೆಸಿ ಶಿವಕುಮಾರ್ ಅವರ ಬಂಧನವನ್ನು ಖಂಡಿಸಿದರು. ಪ್ರತಿಭಟನಕಾರರು ಕೇಂದ್ರ ಸಕಾ೯ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಲ್ಲಿಯೂ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದ್ದು, ನೂರಾರು ಕಾರ್ಯಕರ್ತರು ರಸ್ತೆಯಲ್ಲೇ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಯೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಮನಗರ, ಕೋಲಾರ, ಕನಕಪುರ, ಮಂಡ್ಯ, ಬಿಡದಿಯಲ್ಲಿ ಪ್ರತಿಭಟನಕಾರರು ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಆನೇಕಲ್, ನೆಲಮಂಗಲ, ಹೊಸಕೋಟೆ, ಬಳ್ಳಾರಿ, ಹುಬ್ಬಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ.

ಕನಕಪುರ, ರಾಮನಗರಗಳ, ಚನ್ನಪಟ್ಟಣಗಳಲ್ಲಂತೂ ಪರಿಸ್ಥಿತಿ ಹೊತ್ತಿ ಉರಿಯುವಂತಾಗಿದೆ. ಈ ಭಾಗಗಳಲ್ಲಿ ಜನರು ಸ್ವಘೋಷಿತ ಬಂದ್ ನಡೆಸುತ್ತಿದ್ದಾರೆ.

ಕಳೆದ ರಾತ್ರಿಯಿಂದ ಇಲ್ಲಿಯವರೆಗೆ ಸುಮಾರು 16 ಕೆಎಸ್ಆರ್ ಟಿಸಿ ಬಸ್ಸುಗಳಿಗೆ ಸಂಪೂರ್ಣವಾಗಿ ಸುಟ್ಟುಹೋಗಿವೆ. ಇವುಗಳಲ್ಲಿ ಬಹುತೇಕ ಬಸ್ಸುಗಳು ಕನಕಪುರ, ರಾಮನಗರ ಕಡೆಗೆ ಸಂಚರಿಸುವುದಾಗಿವೆ. ಕನಕಪುರಕ್ಕೆ ಹೋಗುವ ಬಸ್ಸುಗಳನ್ನು ಕೆಲಕಾಲ ತಡೆಹಿಡಿಯಲಾಗಿತ್ತು.

ಬೆಂಗಳೂರು ಹೊರವಲಯ ಬಿಡದಿ ಬಳಿ ಸಂಚರಿಸುತ್ತಿರುವ ವಾಹನಗಳನ್ನು ಪೊಲೀಸರು ಬೇರೆ ಮಾರ್ಗಗಳ ಮೂಲಕ ಹೋಗಲು ಸೂಚಿಸುತ್ತಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಪ್ರಯಾಣಿಕರು ಇಂದು ಬಳಸದಂತೆ ಮನವಿ ಮಾಡಲಾಗಿದೆ.


Spread the love

Exit mobile version