Home Mangalorean News Kannada News ಡಿ; 2 -ಮಂಗಳಮುಖಿಯರೊಂದಿಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶಿಷ್ಠ ಕ್ರಿಸ್‍ಮಸ್ ಆಚರಣೆ

ಡಿ; 2 -ಮಂಗಳಮುಖಿಯರೊಂದಿಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶಿಷ್ಠ ಕ್ರಿಸ್‍ಮಸ್ ಆಚರಣೆ

Spread the love

ಡಿ; 2 ಮಂಗಳಮುಖಿಯರೊಂದಿಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶಿಷ್ಠ ಕ್ರಿಸ್‍ಮಸ್ ಆಚರಣೆ

ಮಂಗಳೂರು: ಜಗತ್ತಿನ ಬಹುದೊಡ್ಡ ಹಬ್ಬ ಕ್ರಿಸ್‍ಮಸ್‍ಗೆ ಕ್ಷಣಗಣನೆ ಆರಂಭವಾಗಿದೆ. ಹಲವರಿಗೆ ಈ ಕ್ರಿಸ್‍ಮಸ್ ಜೊತೆಯಾಗಿ ಸೇರಿ ಬಾಲಯೇಸುವಿನ ಜನನದ ಸಂತೋಷವನ್ನು ಪ್ರಾರ್ಥನೆಯ ಮೂಲಕ ವ್ಯಕ್ತಪಡಿಸುವುದಾದರೆ, ಕೆಲವರಿಗೆ ಆಧ್ಯಾತ್ಮಿಕ ಶುದ್ದೀಕರಣದ ಒಂದು ಹಬ್ಬವಾಗಿದೆ. ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚುಗಳಲ್ಲಿ ಕ್ಯಾರಲ್ ಗೀತೆಗಳ ಗಾಯನ ಸ್ಪರ್ಧೆಗಳು, ಇತರ ಕ್ರಿಸ್‍ಮಸ್ ಸಂಬಂಧಿತ ಸ್ಪರ್ಧೆಗಳು ನಡೆದರೆ ಮನೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ನಕ್ಷತ್ರಗಳ ಅಲಂಕಾರಕ್ಕೆ ಸೀಮಿತವಾಗುತ್ತದೆ.

ಕ್ರಿಸ್‍ಮಸ್ ಹಬ್ಬ ಪ್ರತಿಯೊಬ್ಬರನ್ನು ಬೆಸೆಯುವ ಹಬ್ಬವಾಗಿದ್ದು ಪ್ರತಿಯೊಂದು ಮನೆಗಳಲ್ಲಿ ಸಿಹಿತಿಂಡಿಗಳಾದ ಕುಸ್ವಾರ್ ತಯಾರಿಯೊಂದಿಗೆ ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವ ಹಬ್ಬವಾಗಿದೆ. ಕ್ರಿಸ್‍ಮಸ್ ಹಬ್ಬದ ಸಂದರ್ಭ ಕೆಲವರು  ಕ್ರಿಸ್‍ಮಸ್ ಸಂತೋಷ ಕೂಟ, ಕೇಕ್ ತಯಾರಿ, ಹೊಸ ಬಟ್ಟೆ ಖರೀದಿ, ಚಿನ್ನ ಖರೀದಿ, ಪ್ರೀತಿಪಾತ್ರರಿಗೆ ಕ್ರಿಸ್‍ಮಸ್ ಸಂದೇಶಗಳನ್ನು ಕಳುಹಿಸುವುದು ಇದೆಲ್ಲಾ ಸಾಮಾನ್ಯವಾಗಿ ನಡೆಯುವಂತಹ ಸಂಗತಿಯಾಗಿದೆ. ಆದರೆ ಇವೆಲ್ಲಾ ಸಂಭ್ರಮಗಳ ನಡುವೆ ಸಮಾಜದಲ್ಲಿ ತಿರಸ್ಕರಿಸಲ್ಪಟ್ಟ ಹಲವಾರು ರೀತಿಯ ವ್ಯಕ್ತಿಗಳನ್ನು ಮಾತ್ರ ನಾವು ಮರೆಯುತ್ತೇವೆ. ಯಾರೂ ಕೂಡ ಅಂತಹ ತುಳಿತಕ್ಕೊಳಗಾದ, ತಿರಸ್ಕರಿಸಲ್ಪಟ್ಟ ವ್ಯಕ್ತಿಗಳೊಂದಿಗೆ ಕ್ರಿಸ್‍ಮಸ್ ಆಚರಣೆ ಮಾಡಲು ನೆನಪು ಕೂಡ ಮಾಡುವುದಿಲ್ಲ.

  ಕ್ರಿಸ್‍ಮಸ್ ಆಚರಣೆಯನ್ನು ಅಂತಹ ತಿರಸ್ಕರಿಸಲ್ಪಟ್ಟ, ಸಮಾಜದಲ್ಲಿ ನೋವುಂಡವರಿಗೆ ಮುದ ನೀಡುವ ಕೆಲಸ ಮಾಡಿದಾಗ ನಿಜವಾದ ಆಚರಣೆ ನಡೆಯುತ್ತದೆ. ಸಮಾಜದಲ್ಲಿ ಇರುವ ಮಂಗಳಮುಖಿಯರಿಗೆ ಕ್ರಿಸ್‍ಮಸ್ ಆಚರಣೆ ಏನೆಂದೇ ತಿಳಿದಿರಲಿಕ್ಕಿಲ್ಲ. ಹಲವಾರು ಮಂಗಳಮುಖಿಯರು ತಮ್ಮ ಜೀವನದಲ್ಲಿ ಹಲವು ರೀತಿಯ ನೋವನ್ನು ಕಂಡು, ಅನಾಥರಾಗಿ ಬದುಕುತಿದ್ದಾರೆ. ಯಾವುದೇ ರೀತಿಯ ಗೆಳೆಯರು, ತಮ್ಮವರು ಎಂಬ ಅರಿವೆ ಇಲ್ಲದೆ ಬದುಕುವ ಹಲವಾರು ಮಂಗಳಮುಖಿಯರು ನಮ್ಮ ಸಮಾಜದಲ್ಲಿದ್ದಾರೆ. ಅವರು ನಮ್ಮಂತೆ ದೈಹಿಕವಾಗಿ ಆರೋಗ್ಯವಾಗಿದ್ದರೂ ಕೂಡ ಮಾನಸಿಕವಾಗಿ ನೋವುಂಡು ನರಳುತ್ತಿದ್ದಾರೆ ಅಂತಹವರಿಗೆ ಮಾನವೀಯತೆಯ ಪ್ರೀತಿಯನ್ನು ತೋರುವುದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು.

ಅಂತಹ ಮಂಗಳಮುಖಿಯರ ಮೊಗದಲ್ಲಿ ಸಂತೋಷ ಹಾಗೂ ನಗು ಮೂಡಿಸುವ ನಿಟ್ಟಿನಲ್ಲಿ ಮತ್ತು ಅವರು ಕೂಡ ಸಮಾಜದಲ್ಲಿ ತಿರಸ್ಕರಿಸಲ್ಪಟವರಲ್ಲ ಎನ್ನವುದನ್ನು ತೋರ್ಪಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಎಂಬಂತೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಹಬ್ಬದ ಸಂತೋಷವನ್ನು ಮಂಗಳಮುಖಿಯರೊಂದಿಗೆ ಸೇರಿ ಸಂಭ್ರಮಿಸಲು ನಿರ್ಧರಿಸಿದೆ ಎಂದು ಟ್ರಸ್ಟಿನ ಸಂಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ವಾಯ್ಲೆಟ್ ಪಿರೇರಾ ಹೇಳಿದರು.  ನಗರದ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಮಂಗಳಮುಖಿಯರೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ರೋಶನಿ ನಿಲಯದ ಸಭಾಂಗಣದಲ್ಲಿ ಡಿಸೆಂಬರ್ 2 ರಂದು ಪೂರ್ವಾಹ್ನ 10 ಗಂಟೆಗೆ ಜರುಗಲಿದೆ.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ, ಮಂಗಳೂರು ಶಾಸಕರಾದ ಜೆ.ಆರ್.ಲೋಬೊ ಹಾಗೂ ಸುರತ್ಕಲ್ ಶಾಸಕರಾದ ಮೊಯ್ದಿನ್ ಬಾವಾ ಹಾಗೂ ರೋಶನಿ ನಿಲಯದ ಪ್ರಾಂಶುಪಾಲರಾದ ಡಾ|ಸೊಫಿಯಾ ಎನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷೆ ಸ್ವಪ್ನಾ ವಹಿಸಲಿದ್ದು, ಇದೇ ಸಂದರ್ಭದಲ್ಲಿ ಸಾಧನೆ ತೋರಿದ ಟ್ರಸ್ಟಿನ ಮಂಗಳಮುಖಿ ಸಾಧಕರಾದ ಸಂಜನಾ, ಶ್ರೀನಿಧಿ ಮತ್ತು ಚಂದ್ರಕಲಾ ಅವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಕೂಡ ನಡೆಯಲಿದೆ. ಕಾರ್ಯಕ್ರಮದಲ್ಲಿ ರೋಶನಿ ನಿಲಯದ ವಿದ್ಯಾರ್ಥಿಗಳು ಮತ್ತು ಮಂಗಳಮುಖಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ನಡೆಯಲಿದೆ.

ಮಂಗಳಮುಖಿಯರನ್ನು ಸಮಾಜದಲ್ಲಿ ಗೌರವಯುತವಾಗಿ ಬದಕುಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ   ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಗೊಂಡಿದ್ದು ಅವರುಗಳ ಅಭಿವೃದ್ದಿಗಾಗಿ ಹಾಗೂ ನೆಮ್ಮದಿಯುತ ಬದುಕಿಗಾಗಿ ಟ್ರಸ್ಟ್ ಶ್ರಮಿಸುತ್ತಿದೆ. ಮಂಗಳಮುಖಿಯರು ಯಾರಿಗೂ ಭಾರವಾಗಿ ಬದುಕದೆ ಸ್ವಾಭಿಮಾನಿಗಳಾಗಿ ಬದುಕು ಸಾಗಿಸುವ ನಿಟ್ಟಿನಲ್ಲಿ ಅವರಿಗೆ ಟೈಲರಿಂಗ್   ಕೋರ್ಸುಗಳನ್ನು ಆರಂಭಿಸಿದ್ದು ಹಲವು ಮಂದಿ ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ. ಇದೇ ವೇಳೆ ಇಂತಹ ಮಂಗಳ ಮುಖಿಯರಿಗೆ ಗೌರವಯುತ ಬದುಕು ನೀಡುವುದರೊಂದಿಗೆ ಅವರಿಗೆ ಉತ್ತಮ ಉದ್ಯೋಗ ನೀಡಿದಾಗ ಮಾತ್ರ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿದೆ. ಅದಕ್ಕಾಗಿ ಟ್ರಸ್ಟ್ ಸಾರ್ವಜನಿಕರ, ಮಾಧ್ಯಮ ಪ್ರತಿನಿಧಿಗಳ ಹಾಗೂ ಹಿತೈಷಿಗಳ ಸಹಕಾರವನ್ನು ಬಯಸುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಮಂಗಳಮುಖಿಯರ ಕುರಿತು ಅರಿವು ಮೂಡಿಸುವುದರೊಂದಿಗೆ ಅವರಿಗೆ ಉದ್ಯೋಗ, ಸರಕಾರಿ ಸವಲತ್ತಗಳನ್ನು ಪಡೆಯುಲು ಸಹಕರಿಸುವುದರೊಂದಿಗೆ ಅವರ ಬಾಳಿಗೆ ಆಶಾಕಿರಣವಾಗುವ ಅವಕಾಶವಿದ್ದು ಸಾರ್ವಜನಿಕರು ಕೂಡ ಇಂತಹ ಉತ್ತಮ ಕೆಲಸಕ್ಕೆ ಕೈಜೋಡಿಸಬೇಕೆಂಬುದು ಟ್ರಸ್ಟಿನ ಒತ್ತಾಸೆಯಾಗಿದೆ.

ಟ್ರಸ್ಟಿನ ವತಿಯಿಂದ ಈಗಾಗಲೇ ಹಲವು ಮಂಗಳಮುಖಿಯರ ಬಾಳಿನಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದು ಅದರಲ್ಲಿ ಸಫಲತೆಯನ್ನು ಕೂಡ ಕಾಣಲಾಗಿದೆ. ಟ್ರಸ್ಟಿನ ಕಾರ್ಯದರ್ಶಿ ಸಂಜನಾ   2018 ಜನವರಿಯಲ್ಲಿ ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ನಡಯುವ ರಾಷ್ಟ್ರೀಯ ಲಗೋರಿ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಗೊಂಡಿದ್ದು ಇದು ಟ್ರಸ್ಟಿಗೆ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಟ್ರಸ್ಟಿನ ಕೋಶಾಧಿಕಾರಿ ಶ್ರೀನಿಧಿ ಮತ್ತು ಚಂದ್ರಕಲಾ ಅವರು ಕರ್ನಾಟಕ ಪಾಲಿಟೆಕ್ನಿಕ್‍ನಲ್ಲಿ ಟೈಲರಿಂಗ್ ಕೋರ್ಸನ್ನು ಯಶಸ್ವಿಯಾಗಿ ಪೊರೈಸಿದ್ದು ಇದು ಕೂಡ ಟ್ರಸ್ಟಿನ ಸಾಧನೆಗೆ ಇನ್ನೊಂದು ಗರಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ  ಸಂಜನಾ (ಕಾರ್ಯದರ್ಶಿ -ಪರಿವರ್ತನಾ ಚಾರಿಟೇಬಲ್ ಟ್ರಸ್ಟ್), ಶ್ರೀನಿಧಿ (ಕೋಶಾಧಿಕಾರಿ – ಪರಿವರ್ತನಾ ಚಾರಿಟೇಬಲ್ ಟ್ರಸ್ಟ್), ರಮ್ಯಾ (ಸದಸ್ಯರು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್), ದೀಪಕ್ ಗಂಗೂಲಿ – ಪಾಥ್‍ವೇ ಉಪಸ್ಥತರಿದ್ದರು.

 


Spread the love

Exit mobile version