Home Uncategorized ತಾಸೆ, ಡೋಲಿನ ಲಯಕ್ಕೆ ವಿಭಿನ್ನ ಕಸರತ್ತಿನೊಂದಿಗೆ ಹೆಜ್ಜೆ ಹಾಕಿದ ಹುಲಿವೇಷಧಾರಿಗಳು

ತಾಸೆ, ಡೋಲಿನ ಲಯಕ್ಕೆ ವಿಭಿನ್ನ ಕಸರತ್ತಿನೊಂದಿಗೆ ಹೆಜ್ಜೆ ಹಾಕಿದ ಹುಲಿವೇಷಧಾರಿಗಳು

Spread the love

ತಾಸೆ, ಡೋಲಿನ ಲಯಕ್ಕೆ ವಿಭಿನ್ನ ಕಸರತ್ತಿನೊಂದಿಗೆ ಹೆಜ್ಜೆ ಹಾಕಿದ ಹುಲಿವೇಷಧಾರಿಗಳು

ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನವರಾತ್ರಿ ಪ್ರಯುಕ್ತ ಜೆಸಿಐ ಕುಂದಾಪುರ ಸಿಟಿ ಹಾಗೂ ಕಿಯೋನಿಕ್ಸ್ ಯುವ ಡಾಟ್ಕಾಮ್ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರದ ಸಹಯೋಗದಲ್ಲಿ ಕಾಲೇಜಿನ ಲಲಿತ ಕಲಾ ಸಂಘದ ನೇತೃತ್ವದಲ್ಲಿ ಕುಂದಾಪುರದ ಟಿ.ಟಿ. ಟೈಗರ್ಸ್ ಹುಲಿವೇಷಧಾರಿಗಳ ತಂಡದಿಂದ ನಡೆದ ಹುಲಿವೇಷ ಕುಣಿತದ ಝಲಕ್.

ಕಾಲೇಜಿನ ಆವರಣದಲ್ಲಿ ತಾಸೆ, ಡೋಲಿನ ಸದ್ದು ಅನುರಣಿಸುತ್ತಿದ್ದಂತೆ ಹುಲಿವೇಷಧಾರಿಗಳ ನರ್ತನ ನೋಡುಗರ ಕಣ್ಮನ ಸೆಳೆಯಿತು. ಚರಣ್ ನೇತೃತ್ವದ ಟಿ.ಟಿ. ಟೈಗರ್ಸ್ ತಂಡದ 12 ಮಂದಿ ಹುಲಿವೇಷಧಾರಿಗಳು ಬಿಸಿಲಿನ ಬೇಗೆಯ ನಡುವೆಯೂ ವಿವಿಧ ವರಸೆಗಳನ್ನು ಪ್ರದರ್ಶಿಸಿದ್ದಲ್ಲದೆ, ಪಲ್ಟಿ ಹೊಡೆದು, ವಿಭಿನ್ನ, ವಿಶಿಷ್ಟ ಕಸರತ್ತುಗಳೊಂದಿಗೆ ನೆರೆದ ಸಾವಿರಾರು ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕರನ್ನು ರಂಜಿಸಿತು. ಹುಲಿವೇಷಧಾರಿಗಳೊಂದಿಗೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹ ತಾಸೆ, ಡೋಲಿನ ಸದ್ದಿಗೆ ಕುಣಿದು, ಕುಪ್ಪಳಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ವಿದ್ಯಾರ್ಥಿನಿಯರಂತೂ ಭಾರೀ ಜೋಶ್ನಲ್ಲಿ ಹುಲಿವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಗಮನಸೆಳೆದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪೆÇ್ರ| ಕೊತ್ತಾಡಿ ಉಮೇಶ್ ಶೆಟ್ಟಿ, ಬಿ.ಬಿ. ಹೆಗ್ಡೆ ಕಾಲೇಜು ಯಾವಾಗಲೂ ವಿಭಿನ್ನವಾದ ಆಲೋಚನೆಯೊಂದಿಗೆ ಬೇರೆ ಬೇರೆ ಕಾರ್ಯಕ್ರಮ ಆಯೋಜಿಸುತ್ತಿದೆ. ಸಾಂಸ್ಕೃತಿ, ಜಾನಪದ ಸೊಗಡಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಹುಲಿವೇಷ ಕುಣಿತವನ್ನು ಏರ್ಪಡಿಸಿದ್ದೇವೆ. ಹುಲಿ ದೇವಿಯ ವಾಹನ. ನವರಾತ್ರಿಯ ವೇಳೆ ದೇವಿಯಷ್ಟೇ ಹುಲಿಗೂ ಪ್ರಾಮುಖ್ಯ ನೀಡುತ್ತೇವೆ. ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಹುಲಿ ವೇಷ ವಿಶೇಷವಾದುದು ಎಂದರು.

ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ನವರಾತ್ರಿ ವೇಳೆ ಹುಲಿ ಕುಣಿತ ವಿಶೇಷ ಆಕರ್ಷಣೆ. ಇತ್ತೀಚಿನ ದಿನಗಳಲ್ಲಿ ಹುಲಿ ವೇಷ ಕಣ್ಮರೆಯಾಗುತ್ತಿದೆ ಎನ್ನುವ ಅಪವಾದದ ನಡುವೆಯೂ ಕರಾವಳಿ ಭಾಗದಲ್ಲಿ ಈಗಲೂ ಜನಪ್ರಿಯವಾಗಿದೆ. ಸಾಂಪ್ರದಾಯಿಕ ಹುಲಿವೇಷದ ಕುಣಿತವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ| ಸೋನಿ ಡಿ’ಕೊಸ್ತಾ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಯೋಜಿತ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಪ್ರಮುಖರಾದ ಕಾರ್ತಿಕೇಯ ಮಧ್ಯಸ್ಥ, ವಿಜಯ ಭಂಡಾರಿ, ಶೈಲಾ, ಶ್ರುತಿ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಕಿಯೋನಿಕ್ಸ್ ಯುವ. ಕಾಮ್ನ ಧೀರಜ್ ಹೆಜಮಾಡಿ, ಅಂಬಿಕಾ ಧೀರಜ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ದೀಪಿಕಾ ಜಿ., ರವಿನಾ ಸಿ.ಪೂಜಾರಿ, ನಿರ್ಮಲಾ ಬಿ., ಉಪನ್ಯಾಸಕ ವೃಂದ, ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

Exit mobile version