ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ
ಮಂಗಳೂರು: ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ತನ್ನ ಅಪ್ರತಿಮ ಕಂಠಸಿರಿಯ ಮೂಲಕ ಗಾನಕೋಗಿಲೆ, ರಸರಾಗಚಕ್ರವರ್ತಿ ಎಂದೇ ಬಿರುದು ಪಡೆದಿದ್ದ ದಿನೇಶ್ ಅಮ್ಮಣ್ಣಾಯ (68) ಗುರುವಾರ ಬೆಳಗ್ಗೆ ನಿಧನ ಹೊಂದಿದರು.
ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಹೊಸ್ತೋಟ ಪಾಳ್ಯ ನಿವಾಸಿಯಾಗಿರುವ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕೆಲ ಕಾಲದಿಂದ ತೀವ್ರ ಅಸೌಖ್ಯದಿಂದಿದ್ದ ಅವರು, ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಕರ್ನಾಟಕ ಮೇಳ, ಎಡನೀರು ಮೇಳ ಸಹಿತ ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಲ್ಲಿ ಭಾಗವತರಾಗಿ ಜನಪ್ರಿಯರಾಗಿದ್ದ ಅವರು ಭಾವಪ್ರಧಾನ ಪ್ರಸಂಗಗಳ ಗಾಯನಕ್ಕೆ ಹೆಸರುವಾಸಿಯಾಗಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.