Home Mangalorean News Kannada News ದೇಶವನ್ನು ಕೊಳ್ಳೆ ಹೊಡೆಯುವ ಯಾರನ್ನೂ ಚೌಕಿದಾರ್ ಸುಮ್ಮನೆ ಬಿಡೋಲ್ಲ – ಮಂಗಳೂರಿನಲ್ಲಿ ಮೋದಿ

ದೇಶವನ್ನು ಕೊಳ್ಳೆ ಹೊಡೆಯುವ ಯಾರನ್ನೂ ಚೌಕಿದಾರ್ ಸುಮ್ಮನೆ ಬಿಡೋಲ್ಲ – ಮಂಗಳೂರಿನಲ್ಲಿ ಮೋದಿ

Spread the love

ದೇಶವನ್ನು ಕೊಳ್ಳೆ ಹೊಡೆಯುವ ಯಾರನ್ನೂ ಚೌಕಿದಾರ್ ಸುಮ್ಮನೆ ಬಿಡೋಲ್ಲ – ಮಂಗಳೂರಿನಲ್ಲಿ ಮೋದಿ

ಮಂಗಳೂರು: ದೇಶವನ್ನು ಕೊಳ್ಳೆ ಹೊಡೆಯುವ ಯಾರನ್ನೂ ಚೌಕಿದಾರ್ ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಅವರು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ಐದು ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ? ಎಂದು ಪ್ರತಿಪಕ್ಷಗಳು, ‘ಮಹಾ ಮಿಲಾವಟಿ’ಗಳು ಕೇಳುತ್ತಾರೆ. ವಂಚಕರಿಗೆ, ಭ್ರಷ್ಟರಿಗೆ, ಮಧ್ಯವರ್ತಿಗಳಿಗೆ ಆಡಳಿತದಲ್ಲಿ ಅವಕಾಶವಿಲ್ಲದಂತೆ ಮೋದಿ ಮಾಡಿದ್ದಾನೆ. ಈ ಮೋದಿ ಬೆಣ್ಣೆಯಿಂದ ಮಾತ್ರ ಕೀರು ಮಾಡುವವನಲ್ಲ, ಕಲ್ಲಿನಿಂದಲೂ ಕೀರು ಮಾಡುತ್ತಾನೆ. ದೇಶದ ಬೊಕ್ಕಸಕ್ಕೆ ವಂಚಿಸಿದವರನ್ನು ಎಲ್ಲಿದ್ದರೂ ಹುಡುಕಿ ತಂದು ಕಾನೂನಿನಂತೆ ಶಿಕ್ಷೆಗೆ ಗುರಿಪಡಿಸಲು ಮೋದಿ ಸರಕಾರ ಬದ್ಧವಾಗಿದೆ.

ಈಗಾಗಲೇ ವಿವಿಐಪಿ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಮಿಷೆಲ್ ಮಾಮನನ್ನು ಗಡೀಪಾರು ಮಾಡಿಸಿ ತಂದು ಕಾನೂನಿನ ಕಟಕಟೆ ಹತ್ತಿಸಿದ್ದೇವೆ. ಇನ್ನೂ ಮೂವರು ವಂಚಕರು ಶೀಘ್ರ ಭಾರತಕ್ಕೆ ಗಡೀಪಾರಾಗಿ ಬರಲಿದ್ದಾರೆ. ದೇಶವನ್ನು ಕೊಳ್ಳೆ ಹೊಡೆಯುವ ಯಾರನ್ನೂ ಈ ಚೌಕಿದಾರ್ ಸುಮ್ಮನೆ ಬಿಡುವುದಿಲ್ಲ. ಅದಕ್ಕಾಗಿಯೇ ‘ಮಹಾಮಿಲಾವಟಿ’ಗಳೆಲ್ಲ ಒಟ್ಟಾಗಿ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ, ‘ಮಂದಿರ, ಮಠ, ಭಕ್ತಿ, ಅಧ್ಯಾತ್ಮ, ಸಂಸ್ಕೃತಿ, ಜ್ಞಾನ- ಇವೆಲ್ಲದರ ಈ ಭೂಮಿಗೆ ನನ್ನ ಆದರ ಪೂರ್ವಕ ಪ್ರಣಾಮಗಳು ಎನ್ನುತ್ತ ಶ್ರೀರಾಮನವಮಿಯ ಶುಭಾಶಯ ಕೋರಿದರು.

ನಿಮ್ಮ ಪ್ರೀತಿ ದೇಶದ ಹಿತಕ್ಕಾಗಿ ಕೆಲಸ ಮಾಡಲು ನನಗೆ ಮತ್ತಷ್ಟು ಶಕ್ತಿ ನೀಡಿದೆ. ಇಡೀ ಜಗತ್ತಿನಾದ್ಯಂತ ಈಗ ಹಿಂದೂಸ್ಥಾನದ್ದೇ ಡಂಗೂರವಾಗಿದೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ರಷ್ಯಾ ಸೇರಿದಂತೆ ಎಲ್ಲೆಲ್ಲೂ ಹಿಂದೂಸ್ಥಾನ್ ಮಂತ್ರ ಮೊಳಗಿದೆ. ಇದಕ್ಕೆಲ್ಲಾ ಕಾರಣ ನಾನಂತೂ ಅಲ್ವೇ ಅಲ್ಲ, ಅದಕ್ಕೆ ಕಾರಣ ನೀವು. ನವಭಾರತಕ್ಕೆ ನಾಂದಿ ಹಾಡಲು 2019ರ ಚುನಾವಣೆ ವೇದಿಕೆಯಾಗಿದೆ. ಈ ಚುನಾವಣೆಯಲ್ಲಿ ನೀವು ನನಗೆ ಶಕ್ತಿತುಂಬಿ ಎಂದು ಮನವಿ ಮಾಡಿಕೊಂಡರು.

‘ದಕ್ಷಿಣ ಕನ್ನಡ, ಉಡುಪಿ ಜನರ ಸ್ನೇಹಕ್ಕೆ ಋಣಿ. ಮಂಗಳೂರಿನ ಈ ಮೈದಾನಕ್ಕೆ ಹಲವು ಬಾರಿ ಬಂದಿದ್ದೇನೆ. ಇವತ್ತು ಕೇಸರಿ ಸಮುದ್ರವೇ ಇಲ್ಲಿ ಕಾಣಿಸುತ್ತಿದೆ. ಕೇಸರಿ ಬಣ್ಣದ ಹೊಳೆಯೇ ಹರಿದಿದೆ. ವಿಮಾನ ನಿಲ್ದಾಣದಿಂದ ಇಲ್ಲಿವರೆಗೆ ಬರಲು ಬಹಳ ಕಷ್ಟವಾಯತು. ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ಮಾನವ ಗೋಡೆಯೇ ನಿರ್ಮಾಣವಾಗಿತ್ತು. ಇಷ್ಟು ಉದ್ದದ ರಸ್ತೆಯಲ್ಲಿ ಲಕ್ಷಾಂತರ ಜನ ಕಾಯುತ್ತಿದ್ದರೆ ಇನ್ನು ಮೈದಾನದಲ್ಲಿ ಎಷ್ಟು ಮಂದಿ ಇರಬಹುದು ಎಂದು ನಾನು ಆಶ್ಚರ್ಯ ಪಟ್ಟೆ’ ಎಂದು ಮೋದಿ ಹೇಳಿದರು.

ಹಿಂದಿನ ಯುಪಿಎ ಸರಕಾರದ ವಂಶೋದಯದ ಪ್ರತಿಪಾದಕರು ಕಮಿಷನ್ ಪಡೆದು ವಂಚಕರಿಗೆ ಅದೆಷ್ಟು ಸಾಲ ನೀಡಿದರೋ ಗೊತ್ತಿಲ್ಲ. ಸಂಪೂರ್ಣ ತನಿಖೆಯಿಂದ ಅದು ಹೊರಬರಬೇಕು ಎಂದು ಪ್ರಧಾನಿ ಮೋದಿ ಚಾಟಿ ಬೀಸಿದರು.

ನಮ್ಮ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆಯಿದೆ. ಅವರ ವಂಶೋದಯದಲ್ಲಿ ಯಾವ ಪಾರದರ್ಶಕತೆಯೂ ಇಲ್ಲ. ನಮ್ಮ ಅಂತ್ಯೋದಯವಾದಲ್ಲಿ ಚಹಾ ಮಾರುವವನೂ ಪ್ರಧಾನಿಯಾಗುತ್ತಾನೆ. ಅವರ ವಂಶೋದಯದಲ್ಲಿ ಯಾವ ಅರ್ಹತೆಯಿಲ್ಲದವನೂ ವಂಶದ ಹೆಸರು ಹೇಳಿಕೊಂಡು ಉನ್ನತ ಹುದ್ದೆಗೆ ತಾನು ಅರ್ಹ ಎಂದು ಭಾವಿಸಿಕೊಳ್ಳುತ್ತಾನೆ ಎಂದು ಮೋದಿ ಹೇಳಿದರು.

ನಮ್ಮ ಆಡಳಿತದಲ್ಲಿ ದೇಶದಲ್ಲಿ ನವ ಮಧ್ಯಮ ವರ್ಗ ನಿರ್ಮಾಣವಾಗಿದೆ. ಅವರ ವಂಶೋದಯದಲ್ಲಿ ಮಧ್ಯವರ್ತಿಗಳು ಮತ್ತು ಅವರ ಕುಟುಂಬಗಳು ಮಾತ್ರ ಉದ್ಧಾರವಾಗಿವೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್- ಜೆಡಿಎಸ್ನದ್ದು ಪರಿವಾರದ ವಾದವಾದರೆ ನಮ್ಮದು ರಾಷ್ಟ್ರವಾದ. ನಾವು ಜನಸಾಮಾನ್ಯರನ್ನು ಮುಂದೆ ತರಲು ಯೋಚಿಸುತ್ತೇವೆ. ಅವರು ತಮ್ಮ ಕುಟುಂಬವನ್ನು ಮುಂದೆ ತರಲು ಯೋಚಿಸುತ್ತಾರೆ ಎಂದು ಮೈತ್ರಿ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಟೀಕಾಸ್ತ್ರ ಪ್ರಯೋಗಿಸಿದರು. ನಮ್ಮದು ಅಂತ್ಯೋದಯ ರಾಜಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ಕುಟುಂಬ ರಾಜಕಾರಣ ಪೋಷಿಸಿದವರಿಗೆ ಪದ್ಮ ಪ್ರಶಸ್ತಿ ಕೊಟ್ಟರು. ನಮ್ಮ ಅವಧಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರಿಗೆ ಪದ್ಮ ಗೌರವವನ್ನು ನೀಡಿದೆವು. ಸರ್ಜಿಕಲ್ ಸ್ಟ್ರೈಕ್ ಆದರೆ ಸಾಕ್ಷಿ ಕೇಳೋ ಇವರೆಂಥಾ ದೇಶಭಕ್ತರು? ಇವರದು ಎಂಥ ಕೀಳುಮಟ್ಟದ ರಾಜಕಾರಣವೆಂದರೆ ಭಾರತದ ಯೋಧರನ್ನು ಅಗೌರವದಿಂದ ಕಾಣುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಹುತಾತ್ಮ ಸೈನಿಕರನ್ನು ಕೂಡ ಸ್ಮರಿಸುವಷ್ಟು ಸಮಯ ಅವರಿಗೆ ಇರಲಿಲ್ಲ. ಸೈನಿಕರಿಗೆ ಯಾವುದೇ ಗೌರವ ಸಿಗುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ನಿವೃತ್ತ ಸೈನಿಕರಿಗಾಗಿ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಉಗ್ರರ ಮನೆಗೆ ನುಗ್ಗಿ ಅವರನ್ನು ಸದೆಬಡಿದಿದ್ದೇವೆ. ಸೈನಿಕರ ಈ ಪರಾಕ್ರಮವನ್ನು ಇಡೀ ದೇಶ ಮತ್ತು ಜಗತ್ತು ಶ್ಲಾಘಿಸಿದರೆ, ಕಾಂಗ್ರೆಸ್‌ ಮತ್ತು ಅದರ ಬೆಂಬಲಿಗ ಪಕ್ಷಗಳ ನಾಯಕರು ಸೈನಿಕರ ಕಾರ್ಯಾಚರಣೆಯ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದಾರೆ. ಮಾತ್ರವಲ್ಲ ಸೇನಾಧಿಕಾರಿಯನ್ನು ಗಲ್ಲಿಯ ಗೂಂಡಾ ಎಂದು ಕರೆದು ಅವಮಾನ ಮಾಡಿದ್ದಾರೆ. ಸೇನೆಯನ್ನು ಸುಳ್ಳುಗಾರ ಎಂದು ಕರೆದಿದ್ದಾರೆ ಎಂದು ಟೀಕಿಸಿದರು.

ಕೇರಳದ ಕಮ್ಯುನಿಸ್ಟ್ ಸರ್ಕಾರ ಶಬರಿಮಲೆ ಮತ್ತು ಅಯ್ಯಪ್ಪ ಸ್ವಾಮಿ ಹೆಸರು ಹೇಳಿದವರನ್ನು ಜೈಲಿಗೆ ಕಳುಹಿಸಿದೆ. ಬಿಜೆಪಿ ಅಭ್ಯರ್ಥಿಯೊಬ್ಬರನ್ನು ಕೂಡ ಜೈಲಿಗೆ ಹಾಕಿದೆ ಎಂದು ಪ್ರಧಾನಿ ಆರೋಪಿಸಿದರು.

ಮಂಗಳೂರು ಮತ್ತು ದಕ್ಷಿಣ ಕನ್ನಡ ಬ್ಯಾಂಕ್ ಕ್ಷೇತ್ರಗಳ ತವರೂರು. ರಾಷ್ಟ್ರೀಯ ಬ್ಯಾಂಕ್‌ಗಳಿಂದ ಕಾಂಗ್ರೆಸ್‌ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಾಲ ನೀಡಿದೆ. ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಅದು ವೆಂಟಿಲೇಟರ್‌ನಲ್ಲಿ ಇರುವಂತೆ ಮಾಡಿತು. ಆದರೆ ಈ ಚೌಕಿದಾರ್ ಬಂದ ನಂತರ ಈ ಆಟ ನಡೆಯುವುದಿಲ್ಲ. ಈ ರೀತಿಯ ಆಟವಾಡಲು ಮೋದಿ ಬಿಡುವುದಿಲ್ಲ. ಈಗಾಗಲೇ ಮಿಷಲ್, ಸಕ್ಸೇನಾ, ತಳವಾರ್‌ ಅವರನ್ನು ಕರೆತಂದ್ದಿದ್ದೇವೆ. ಇನ್ನೂ ಹಲವರನ್ನು ಕರೆ ತರುತ್ತೇವೆ ಎಂದು ಮೋದಿ ಹೇಳಿದರು.

ಮೀನುಗಾರರಿಗೆ ಪ್ರತ್ಯೇಕವಾಗಿ ಸಚಿವಾಲಯವನ್ನು ತೆರೆಯುತ್ತೇವೆ. ಮೀನುಗಾರರಿಗೆ ಮತ್ಸ್ಯಸಂಪದ ಯೋಜನೆಯನ್ನು ಜಾರಿ ಮಾಡಲಿದ್ದೇವೆ. ಆಳ ಸಮುದ್ರ ಮೀನುಗಾರರಿಗೆ ಹಣಕಾಸಿನ ನೆರವು ನೀಡುತ್ತೇವೆ. ಅಲ್ಲದೆ, ಮೀನುಗಾರರಿಗಾಗಿ ತಂತ್ರಜ್ಞಾನವನ್ನು ಅಳವಡಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದರು.


Spread the love

Exit mobile version