ದ್ವಿಚಕ್ರ ವಾಹನಕ್ಕೆ ಟಾಟಾ ಸುಮೋ ಡಿಕ್ಕಿ ಹೊಡೆಸಿ ವ್ಯಕ್ತಿಯ ಕೊಲೆ ಯತ್ನ; ಆರೋಪಿಗೆ ನ್ಯಾಯಾಂಗ ಬಂಧನ
ಮಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಕೊಲ್ಲುವ ದುರುದ್ದೇಶದಿಂದ ಟಾಟಾ ಸುಮೋ ವಾಹನದಿಂದ ಹಿಂಬಾಲಿಸಿ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಆರೋಪಿ ಧರ್ಮಸ್ಥಳ ನಿವಾಸಿ ಶರತ್ (33) ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಎಂಬುವರು ನೀಡಿದ ದೂರಿನಂತೆ, ಆರೋಪಿ ಶರತ್ ಈ ಹಿಂದೆ ವಾಹನ ಡಿಕ್ಕಿ ಹೊಡಿಸಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿದ್ದ. ಜುಲೈ 30 ರಂದು ಸಂಜೆ ವೇಳೆಗೆ ಬಾಲಕೃಷ್ಣ ಅವರು ಕೆಲಸ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೊಲ್ಲುವ ಉದ್ದೇಶದಿಂದಲೇ ಟಾಟಾ ಸುಮೋ ವಾಹನದಲ್ಲಿ ಬೆನ್ನಟ್ಟಿ ಬಂದ ಆರೋಪಿ ಶರತ್, ಧರ್ಮಸ್ಥಳ ಗ್ರಾಮದ ಕುರುಮಾನಿ ಕ್ರಾಸ್ ಬಳಿ ಬಾಲಕೃಷ್ಣ ಅವರ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಆಸ್ಪತ್ರೆಗೆ ದಾಖಲು – ಆರೋಪಿ ಸೆರೆ: ಅಪಘಾತದ ತೀವ್ರತೆಯಿಂದ ಬಾಲಕೃಷ್ಣ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಬಾಲಕೃಷ್ಣ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2026, ಕಲಂ: 109 BNS 2023 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಧರ್ಮಸ್ಥಳ ಠಾಣಾ ಪೊಲೀಸರು ತನಿಖೆ ನಡೆಸಿ, ಆರೋಪಿ ಶರತ್‌ನನ್ನು ಶನಿವಾರ (ಆಗಸ್ಟ್ 22) ರಂದು ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
