ಧರ್ಮಭಗಿನಿಯರ ಬಂಧನ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ – ಭಾರತೀಯ ಕ್ರೈಸ್ತ ಒಕ್ಕೂಟ ಬೆಂಬಲ
ಉಡುಪಿ: ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪ ಹೊರಿಸಿ ಮೇಲೆ ಬಂಧಿಸಿರುವ ಕ್ರಮವನ್ನು ಖಂಡಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ನೇತೃತ್ವದಲ್ಲಿ ಅಗೋಸ್ತ್ 4 ರಂದು ಸೋಮವಾರ ಸಂಜೆ 4ಗಂಟೆಗೆ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಆಯೋಜಿಸಿರುವ ಪ್ರತಿಭಟನೆಗೆ ಭಾರತೀಯ ಕ್ರೈಸ್ತ ಒಕ್ಕೂಟ ಸಂಪೂರ್ಣ ಬೆಂಬಲ ಸೂಚಿಸಿದೆ.
ಬಂಧಿತ ಧರ್ಮಭಗಿನಿಯರನ್ನು ಷರತ್ತುಗಳ ಮೇಲೆ ಶನಿವಾರ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ ಆದರೆ ಅವರ ಮೇಲೆ ಹಾಕಲಾಗಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆದಿಲ್ಲ. ಅಲ್ಲದೆ ಧರ್ಮಭಗಿನಿಯರನ್ನು ಛತ್ತೀಸ್ ಘಡದ ದುರ್ಗ ರೈಲು ನಿಲ್ದಾಣದಲ್ಲಿ ಬಲಪಂಥೀಯ ಸಂಘಟನೆಗಳು ಅಮಾನವೀಯವಾಗಿ ನಡೆಸಿಕೊಂಡಿದ್ದು ಆ ಸಂಘಟನೆಗಳ ವಿರುದ್ದ ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದೊಂದು ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಕ್ರೈಸ್ತ ಸಮುದಾಯದ ಬೇಡಿಕೆಗಳಿಗೆ ಛತ್ತೀಸ್ ಘಡದ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.
ಈ ಪ್ರತಿಭಟನೆಯ ಮೂಲಕ ಧರ್ಮಭಗಿನಿಯೊರೊಂದಿಗೆ ಕ್ರೈಸ್ತ ಸಮುದಾಯ ಜೊತೆಗಿರಲಿದೆ ಎಂಬ ಸಂದೇಶವನ್ನು ನೀಡಲಾಗುತ್ತಿದ್ದು ಭಾರತೀಯ ಕ್ರೈಸ್ತ ಒಕ್ಕೂಟದ 100 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.