Home Mangalorean News Kannada News ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ಸಾಹಿತ್ಯ ಸಮ್ಮೇಳನದ 85ನೇ ಅಧೀವೇಶನ

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ಸಾಹಿತ್ಯ ಸಮ್ಮೇಳನದ 85ನೇ ಅಧೀವೇಶನ

Spread the love

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ಸಾಹಿತ್ಯ ಸಮ್ಮೇಳನದ 85ನೇ ಅಧೀವೇಶನ

ಉಜಿರೆ: ಸಾಹಿತ್ಯ, ಸಂಗೀತ, ಕಲೆಯಿಂದ ಜೀವನ ಪರಿಪೂರ್ಣವಾಗುತ್ತದೆ. ಶ್ರದ್ಧೆಯಿಂದ, ನಿಷ್ಠೆಯಿಂದ ಕಷ್ಟಪಟ್ಟು ಕೆಲಸ ಮಾಡಿದರೆ ಇಷ್ಟ ಪಟ್ಟದ್ದನ್ನು ಪಡೆಯಬಹುದು. ಜೀವನಾನುಭವದಿಂದ ನಾವು ಉತ್ತಮ ಸಾಹಿತ್ಯ ರಚನೆ ಮಾಡಬಹುದು ಎಂದು ಖ್ಯಾತ ಸಾಹಿತಿ ಸುಧಾಮೂರ್ತಿ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ನಿಜ ಜೀವನದಲ್ಲಿ ಕೇಳಿದ, ನೋಡಿದ, ಅನುಭವಿಸಿದ ಘಟನೆಗಳನ್ನು ಮನನ ಮಾಡಿ ಬರೆದರೆ ಸಾಹಿತ್ಯ ರೂಪುಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ವಿಶೇಷ ಗುಣವಿರುತ್ತದೆ. ಜೀವನದಲ್ಲಿ ಹಣ ಗಳಿಕೆಯೇ ಮುಖ್ಯವಲ್ಲ. ಪ್ರೀತಿ-ವಿಶ್ವಾಸ, ಮಾನವೀಯತೆ ಮತ್ತು ಹೃದಯ ಶ್ರೀಮಂತಿಕೆಯಿಂದ ಸಂಬಂಧಗಳು ಭದ್ರವಾಗುತ್ತವೆ. ಅರ್ಥಪೂರ್ಣವಾಗುತ್ತವೆ. ಸ್ವಾರ್ಥ ಮರೆತು ಲಾಭ-ನಷ್ಟವನ್ನು ಪರಿಗಣಿಸದೆ ನಿಷ್ಕಲ್ಮಶ ಪ್ರೀತಿ ಮತ್ತು ಆತ್ಮೀಯತೆಯಿಂದ ಮಾತ್ರ ಮಾನವೀಯತೆ ಮೆರೆಯುತ್ತದೆ.

ಸಹೃದಯ ಓದುಗರು ಕೃತಿಗಳನ್ನು ಓದಿ ನೀಡುವ ಪ್ರೋತ್ಸಾಹವೇ ಸಾಹಿತಿಗಳಿಗೆ ಕೃತಿ ರಚನೆಗೆ ಉತ್ಸಾಹ ಮತ್ತು ಹುರುಪು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಹಿರಿಯ ವಿದ್ವಾಂಸ ಬಿ.ಆರ್. ಲಕ್ಷ್ಮಣ ರಾವ್ ಮಾತನಾಡಿ, ಕಾವ್ಯ, ಕವಿತೆ ಒಂದು ವಿಸ್ಮಯ ಆಗಿದೆ. ತಾಳ್ಮೆ, ಪ್ರತಿಭೆ, ಶ್ರಮ ಮತ್ತು ಜೀವನಾನುಭವದಿಂದ ಕಾವ್ಯ ಹಾಗೂ ಕವಿತೆ ರಚನೆ ಮಾಡಲು ಸಾಧ್ಯವಾಗುತ್ತದೆ. ಕವಿತೆ ಹುಟ್ಟುವುದಿಲ್ಲ, ಸಂಭವಿಸುತ್ತದೆ ಎಂದು ಅವರು ಹೇಳಿದರು.

ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನದಿಂದ ಕವಿತೆ ಮೂಡಿ ಬರುತ್ತದೆ. ಕವಿತೆ ರಚನೆಗೆ ಯಾವುದೇ ಸಿದ್ಧ ಸೂತ್ರವಿಲ್ಲ ಎಂದು ಅವರು ತಿಳಿಸಿದರು. ತಾನು ರಚಿಸಿದ ಕೆಲವು ಕವನಗಳನ್ನು ಅವರು ಹಾಡಿದರು.

“ಸಾಹಿತ್ಯ ಹಾಗೂ ಹೊಸ ತಲೆಮಾರು” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಬೆಂಗಳೂರಿನ ಖ್ಯಾತ ವಿಮರ್ಶಕ ಎಸ್.ಆರ್. ವಿಜಯ ಶಂಕರ, ಮಾಹಿತಿ ಎಂಬುದು ಜ್ಞಾನ ಅಲ್ಲ. ನಮ್ಮ ಅನುಭವದ ಮೂಸೆಯಲ್ಲಿ ಬೌದ್ಧಿಕತೆಯೊಂದಿಗೆ ಪರಿವರ್ತನೆ ಆದಾಗ ಕಾವ್ಯ, ಸಾಹಿತ್ಯ ಮೂಡಿ ಬರುತ್ತದೆ. ಹಳೆ ಸಾಹಿತ್ಯದಲ್ಲಿರುವ ಕಥನ ವಿಧಾನ ಹೊಸ ಸಾಹಿತ್ಯದಲ್ಲಿ ಭಾವ ಪ್ರಧಾನವಾಗಿ ಮೂಡಿ ಬಂದಿದೆ. ಭಾವ, ಬುದ್ಧಿಯೊಂದಿಗೆ ಇಂದು ನಾವು ವೈಜ್ಞಾನಿಕ ಸತ್ಯದ ಎದುರು ಕಾವ್ಯದ ಸತ್ಯದ ಸವಾಲನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

“ಸಾಹಿತ್ಯ ಮತ್ತು ಸಾಮಾಜಿಕ ಸಂವೇದನೆ” ಬಗ್ಗೆ ಮಾತನಾಡಿದ ಗುಲ್ಬರ್ಗಾದ ರಂಜಾನ್ ದರ್ಗಾ, ಮಾನವ ಧರ್ಮವೇ ಶ್ರೇಷ್ಠ ಧರ್ಮವಾಗಿದೆ ಎಂದು ಹೇಳಿದರು. ಆದಿ ಕವಿ ಪಂಪ ತನ್ನ ಕೃತಿಗಳಲ್ಲಿ ಸಾಮಾಜಿಕ ಸಂವೇದನೆಯನ್ನು ಪ್ರತಿಪಾದಿಸಿದ್ದಾನೆ. ಯುದ್ಧ ವಿರೋಧಿ, ಹಿಂಸೆ ವಿರೋಧಿ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಗಂಗೆ ಹರಿದು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಭುವನೇಶ್ವರಿ ಹೆಗಡೆ “ಜೀವನ ಮೌಲ್ಯಕ್ಕೆ ವಿನೋದ ಸಾಹಿತ್ಯದ ಕೊಡುಗೆ” ಬಗ್ಗೆ ಮಾತನಾಡಿ, ಹಾಸ್ಯದಲ್ಲಿ ನಂಬಿಕೆ ಇರುವವರು ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾರೆ ಬದುಕನ್ನು ನಗುನಗುತ್ತಾ ಎದುರಿಸಬೇಕು. ಆಧ್ಯಾತ್ಮ ಮತ್ತು ಹಾಸ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ ಅವರು ಧರ್ಮಸ್ಥಳದ ಸೇವಾ ಕಾರ್ಯಗಳು ಜನರಲ್ಲಿ ಆತ್ಮವಿಶ್ವಾಸ, ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಸ್ವಾವಲಂಬನೆಯ ಪಾಠ ಕಲಿಸಿದೆ ಎಂದರು.

ಹಾಸ್ಯ ಸಾಹಿತ್ಯಕ್ಕೆ ನೀತಿ ಸಂಹಿತೆ ಇರಬೇಕು ಎಂದು ಹೇಳಿದ ಅವರು ಹಾಸ್ಯ ಸಾಹಿತ್ಯ ರಚನೆಯಲ್ಲಿ ಅಮಾನವೀಯತೆ, ವ್ಯಂಗ್ಯ ಸಲ್ಲದು ಎಂದರು. ಬಡವರು, ಅಂಗವಿಕಲರು, ದೀನದಲಿತರನ್ನು ಹಾಸ್ಯಕ್ಕೆ ಒಳಪಡಿಸಿ ಅವಮಾನ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.

ಸಾಹಿತ್ಯದಿಂದ ಸಂಸ್ಕøತಿ, ಸಂಸ್ಕಾರ: ಮಾನವೀಯತೆಯನ್ನು ಉಳಿಸಿಕೊಂಡು ಸಂಸ್ಕøತಿ, ಸಂಸ್ಕಾರವನ್ನು ಬೆಳೆಸುವುದು ಸಾಹಿತ್ಯದ ಮೂಲ ಉದ್ದೇಶವಾಗಿದೆ. ಮಾತೃ ಭಾಷಾ ಶಿಕ್ಷಣದ ಮೂಲಕ ಸಾಹಿತ್ಯದ ಅಧ್ಯಯನ ಹೆಚ್ಚಾಗಿ ಎಲ್ಲರಲ್ಲಿ ಸಂವೇದನೆಗಳು, ಭಾವನೆಗಳು ಜಾಗೃತವಾಗುವಂತೆ ಮಾಡಿ, ನಮ್ಮ ನಾಡು, ನುಡಿ ಮತ್ತು ಸಂಸ್ಕøತಿಗಳು ಉಳಿದು ನಮ್ಮತನ ಉಳಿಸಬೇಕು ಹಾಗೂ ಕುಟುಂಬಗಳು ಶಾಂತಿ, ನೆಮ್ಮದಿಯಿಂದ ಬಾಳುವಂತಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮನೆಯಲ್ಲಿ ಹಾಗೂ ನಮ್ಮ ದೈನಂದಿನ ವ್ಯವಹಾರದಲ್ಲಿ ಮಾತೃ ಭಾಷೆಯಾದ ಕನ್ನಡವನ್ನೆ ಬಳಸಬೇಕು. ಮಾತೃ ಭಾಷೆಯನ್ನು ಕಲಿತ ಮಕ್ಕಳಿಗೆ ಕನ್ನಡ ಸಾಹಿತ್ಯದ ಪರಿಚಯವಾದಲ್ಲಿ ನಮ್ಮ ಸಂಸ್ಕøತಿಯೂ ಉಳಿಯುತ್ತದೆ. ಭಾವನೆಗಳು, ಸಂವೇದನೆಗಳು ಅವರಲ್ಲಿ ಮೂಡಿ ಮಾನವೀಯ ಮೌಲ್ಯಗಳು ಹಾಗೂ ಹೃದಯ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.

ಅಧುನಿಕತೆ ಬೆಳೆದಂತೆ ಸಾಹಿತ್ಯದ ಒಲವು ಕಡಿಮೆಯಾಗಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರಬಹುದು. ಆದರೆ ಮೊಬೈಲ್, ಕಂಪ್ಯೂಟರ್, ಐಪ್ಯಾಡ್‍ಗಳ ಮೂಲಕ ಸಾಹಿತ್ಯವನ್ನು ಓದುವ ಯುವ ಸಮೂಹ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಜಾಗತೀಕರಣ ಮತ್ತು ಖಾಸಗೀಕರಣದೊಂದಿಗೆ ವೈಯಕ್ತಿಕತೆಯೂ ಸಾಮಾಜಿಕವಾಗುವ, ಸ್ಥಳೀಯತೆಯು ಜಾಗತೀಕರಣಗೊಳ್ಳುವ ಈಗಿನ ಸಂಧಿ ಕಾಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು ಔಚಿತ್ಯಪೂರ್ಣವಾಗಿದೆ.

21ನೇ ಶತಮಾನದ ಅರುಣೋದಯದೊಂದಿಗೆ ಕನ್ನಡ ಜಾನಪದ ಅಧ್ಯಯನದ ಸಂಕ್ರಮಣ ಸ್ಥಿತಿ, ಮಹಿಳೆಯರ ಧ್ವನಿ ಹಾಗೂ ದಲಿತ ಪರಂಪರೆಯ ಹೆಜ್ಜೆ ಗುರುತುಗಳು ಮೂಡಲು ಆರಂಭವಾಗಿರುವುದು ಔಚಿತ್ಯಪೂರ್ಣವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.

ಕಾರ್ಕಳದ ಪ್ರೊ.ಎಂ. ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ರುಡ್‍ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ ಧನ್ಯವಾದವಿತ್ತರು.

ರಾತ್ರಿ ಲಕ್ಷದೀಪೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಭಕ್ತಾದಿಗಳು ದೀಪೋತ್ಸವನ್ನು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

 


Spread the love

Exit mobile version