ಧರ್ಮಸ್ಥಳ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲು: ದ.ಕ. ಜಿಲ್ಲಾ ಎಸ್ಪಿ ಅರುಣ್ ಕುಮಾರ್
ಮಂಗಳೂರು: ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆಯೇ ಧರ್ಮಸ್ಥಳದಲ್ಲಿ ಹಲವು ಅಪರಾಧ ಕೃತ್ಯಗಳು ನಡೆದಿದೆ. ತನಗೆ ಜೀವ ಬೆದರಿಕೆ ಒಡ್ಡಿ ಈ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಪ್ರಸಕ್ತ ತನಗೆ ಪಾಪಪ್ರಜ್ಞೆ ಕಾಡುತ್ತಿದೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ಧವಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಗುರುವಾರ ತನ್ನ ಕಚೇರಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಈ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದೆ. ದೂರುದಾರರು ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವಂತೆ ವಿನಂತಿಸಿಕೊಂಡ ಮೇರೆಗೆ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:39/2025,ಕಲಂ:211()ಬಿಎನ್‌ಎಸ್ ಕಾಯ್ದೆಯಡಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.