ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ಬಂಧನ ನಿಜ: ಡಾ. ಜಿ. ಪರಮೇಶ್ವರ್
ಉಡುಪಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರನ ಬಂಧನವಾಗಿರುವುದು ನಿಜ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ..
ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಿರಿಯರ ಕ್ರೀಡಾಕೂಟದ ಉದ್ಘಾಟನೆಗೆ ಆಗಮಿಸಿದ ಅವರು ಸುದ್ದಿ ಗಾರರೊಂದಿಗೆ ಮಾತನಾಡುತಿದ್ದರು.
ಸದ್ಯ ದೂರುದಾರ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಎಸ್‌ಐಟಿ ಅಧಿಕಾರಿಗಳು ತನಿಖೆ ಮುಂದುವರಿಸುತ್ತಾರೆ. ಹೆಚ್ಚಿನ ಮಾಹಿತಿ ಎಸ್ಐಟಿಯಿಂದ ಪಡೆಯುತ್ತೇನೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ಇದರ ಹಿಂದೆ ಯಾವ ಜಾಲ ಇದೆ ಅನ್ನುವುದನ್ನು ಪತ್ತೆ ಮಾಡಲಾಗುವುದು.ಎಸ್‌ಐಟಿ ತನಿಖೆ ಮುಕ್ತಾಯ ಆಗುತ್ತಾ ಎಂದು ಹೇಳಲು ಸಾಧ್ಯವಿಲ್ಲ. ಸುಜಾತ ಭಟ್ ವಿಚಾರ ಕೂಡ ತನಿಖೆಯಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಯಾವುದೇ ವಿಚಾರ ಬಹಿರಂಗಗೊಂಡರೆ ಎಸ್ಐಟಿ ತನಿಖೆಗೆ ಅಡ್ಡಿಯಾಗುತ್ತೆ. ಹೀಗಾಗಿ ಯಾವುದನ್ನು ಕೂಡ ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಬಿಜೆಪಿಯವರು ಅನೇಕ ಆರಂಭಗಳನ್ನು ಮಾಡಬಹುದು. ಬೇರೆ ಬೇರೆ ರೀತಿಯ ಹೇಳಿಕೆಗಳು ಬರಬಹುದು. ಹೇಳಿಕೆಗಳ ಆಧಾರದಲ್ಲಿ ತನಿಖೆ ಮಾಡಲು ಆಗಲ್ಲ. ಎಸ್ಐಟಿ ತನ್ನ ಅಂತಿಮ ವರದಿ ಸಲ್ಲಿಸುವವರಿಗೆ ಏನು ಹೇಳಲು ಆಗಲ್ಲ ಎಂದರು.
ಅನಾಮಿಕ ದೂರುದಾರನನ್ನು ಯಾವ ಸೆಕ್ಷನ್ನಲ್ಲಿ ಬಂಧಿಸಲಾಗಿದೆ ಅನ್ನುವುದು ಎಸ್ಐಟಿಯವರಿಗೆ ಗೊತ್ತು. ದೂರುದಾರನ ಹೇಳಿಕೆ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ್ದೆವು ಎಂದ ಅವರು, ಎಸ್ಐಟಿ ಹೇಳಿದ್ದನ್ನು ಎಲ್ಲವೂ ಹೇಳಲು ಸಾಧ್ಯವಿಲ್ಲ. ಅರೆಸ್ಟ್ ಆಗಿರುವುದನ್ನು ಮಾತ್ರ ನಾನು ಖಚಿತ ಪಡಿಸಬಲ್ಲೆ ಎಂದರು.
ಶಾಸಕ ಹರೀಶ್ ಪೂಂಜಾ 2023ರಲ್ಲಿ ಹೇಳಿಕೆಗೆ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ತಡೆ ಆಜ್ಞೆ ತೆರವಾದರೆ ಕ್ರಮ ತೆಗೆದುಕೊಳ್ಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.