Home Mangalorean News Kannada News ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ

ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ

Spread the love

ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ

ಮೂಡುಬಿದಿರೆ, ಮೂವತ್ತಾರು ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬಯಿ ಸೇರಿ, ಮಾನಸಿಕ ಸಮಸ್ಯೆಗೊಳಗಾಗಿ, ಮನೆಯವರ ಸಂಪರ್ಕ ಕಳೆದುಕೊಂಡಿದ್ದ ಇರುವೈಲು ಗ್ರಾಮದ ಚಂದ್ರಶೇಖರ ಮತ್ತೆ ಊರಿಗೆ ಬಂದು ತಾಯಿಯ ಮಡಿಲು ಸೇರಿದ್ದಾರೆ. ಇರುವೈಲು ಕೊನ್ನೆಪದವು ಮಧುಗಿರಿವನದ ಸಂಕಪ್ಪ ಮತ್ತು ಗೋಪಿ ಅವರ ಮೂವರು ಪುತ್ರರು, ಇಬ್ಬರು ಪುತ್ರಿಯರಲ್ಲಿ ಹಿರಿಯವರು ಚಂದ್ರಶೇಖರ. ಊರು ಬಿಟ್ಟು ಆರೇಳು ತಿಂಗಳು ಮುಂಬಯಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವರ ಆರೋಗ್ಯ ಏರುಪೇರಾಯಿತು. ಬಳಿಕ ಮಾನಸಿಕ ಅನಾರೋಗ್ಯದಿಂದ ವಿವಿಧೆಡೆ ಓಡಾಡುತ್ತಿದ್ದು ಊರ ಸಂಪರ್ಕವನ್ನೇ ಬಿಟ್ಟಿದ್ದರು.

ಚಂದ್ರಶೇಖರ ಅವರ ದಯನೀಯ ಪರಿಸ್ಥಿತಿಯನ್ನು ಗಮನಿಸಿದ ಬಾಲು ಕಾಂಬ್ಳೆ ಎಂಬ ಮರಾಠಿ ಕುಟುಂಬದವರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿ ಬಳಿಕ ಹೊಟೇಲ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಇತ್ತ ಇರುವೈಲ್‌ನಲ್ಲಿರುವ ಮನೆಮಂದಿ ಚಂದ್ರಶೇಖರರಿಗಾಗಿ ನಿರಂತರ ಹುಡುಕಾಟ ನಡೆಸುತ್ತಲೇ ಇದ್ದರು.

ನಿಜವಾದ ಮಂತ್ರದೇವತೆಯ ನುಡಿ
ಕೆಲವು ಸಮಯದ ಹಿಂದೆ, ಮಂತ್ರದೇವತೆಯ ದರ್ಶನದ ವೇಳೆ ದೈವವು “ಮನೆ ಮಗ ಬದುಕಿದ್ದಾನೆ. ಮುಂದೆ ನಡೆಯುವ ದರ್ಶನದಲ್ಲಿ ದೈವದ ಚಾಕರಿ ಹಿರಿಯ ಮಗನಿಂದಲೇ ನಡೆಯುತ್ತದೆ’ ಎಂದು ಮನೆಮಂದಿಗೆ ಅಭಯ ನೀಡಿತ್ತು.
ಆ ಬಳಿಕ ಇರುವೈಲು ಸಮೀಪದ ಕುಪ್ಪೆಟ್ಟು ವಿನಲ್ಲಿ ನಡೆದ ಬ್ರಹ್ಮಕಲಶ ಸಂದರ್ಭದಲ್ಲಿ ಮುಂಬಯಿಯಲ್ಲಿ ನೆಲೆಸಿರುವ ಊರ ವ್ಯಕ್ತಿಯೊಬ್ಬರು ಚಂದ್ರಶೇಖರ ಅವರ ಸುಳಿವು ನೀಡಿದ್ದರು. ಆ ಮೂಲಕ ಚಂದ್ರಶೇಖರ ಅವರನ್ನು ಸಂಪರ್ಕಿಸಿದರು. ಕಡೆಗೂ ಮೇ 29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಅವರು ಮನೆ ಸೇರಿದ್ದಾರೆ. ಇಲ್ಲಿ ಬರುವವರೆಗೂ ಅವರ ಮಾನಸಿಕ ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಮನೆಗೆ ಬಂದ ಬಳಿಕ ಸಾಕಷ್ಟು ಗುಣಮುಖರಾಗಿದ್ದಾರೆ.

ತಾಯಿಗೆ 80 ವರ್ಷ ಪ್ರಾಯವಾಗಿದೆ. 36 ವರ್ಷಗಳ ಹಿಂದೆ ಮುಂಬಯಿ ಸೇರಿದ ನಮ್ಮಣ್ಣನಿಗೆ ಈಗ 60 ವರ್ಷ. ಈಗಲಾದರೂ ಬಂದಿರುವರಲ್ಲ ಎಂಬುದೇ ಸಂತೋಷದ ಸಂಗತಿ’ ಎಂದು ಚಂದ್ರಶೇಖರ ಅವರ ಸಹೋದರ ಪ್ರಭಾಕರ ಹೇಳುತ್ತಾರೆ.
ಊರಿನಲ್ಲಿಮೂರನೇ ತರಗತಿವರೆಗೆ ಕಲಿತಿದ್ದ ಅವರು ಬಳಿಕ ಮುಂಬಯಿಯಲ್ಲಿ 2 -3 ವರ್ಷ ಸಂಜೆ ಶಾಲೆಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಮದುವೆಯಾಗಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.

ಇನ್ನು ತಪ್ಪದೇ ಹಾಜರಾಗುವ ಮನೆಯವರ ಪ್ರಾರ್ಥನೆ, ದೈವ-ದೇವರ ಕೃಪೆಯಿಂದ ಮತ್ತೆ ನಾನು ನನ್ನ ಕುಟುಂಬವನ್ನು ಸೇರಿದ್ದೇನೆ. ಇನ್ನೂ ಕೆಲವು ವರ್ಷ ಮುಂಬಯಿಯಲ್ಲಿ ದುಡಿಯಬೇಕೆಂದಿದ್ದೇನೆ. ಇನ್ನು ಮನೆಯವರ ಸಂಪರ್ಕದಲ್ಲಿರುತ್ತಾ, ಮುಂದೆ ಮನೆಯಲ್ಲಿ ನಡೆಯುವ ದೈವ-ದೇವರ ಕೆಲಸ, ಸಮಾರಂಭಗಳಿಗೆ ತಪ್ಪದೇ ಬರುತ್ತೇನೆ ಎಂದು ಚಂದ್ರಶೇಖರ ತಿಳಿಸಿದ್ದಾರೆ.


Spread the love

Exit mobile version