Home Mangalorean News Kannada News ನಿಡ್ಡೋಡಿ : ಹುಲಿಗೆ ಕರು ಬಲಿ

ನಿಡ್ಡೋಡಿ : ಹುಲಿಗೆ ಕರು ಬಲಿ

Spread the love

ನಿಡ್ಡೋಡಿ : ಹುಲಿಗೆ ಕರು ಬಲಿ
ಮಂಗಳೂರು: ನಿಡ್ಡೋಡಿ ಗ್ರಾಮದ ಕಲ್ಲಕುಮೇರು ಪಲ್ಕೆಯ ಮಚ್ಚಾರು ಬಾಳಿಕೆ ಲೊಕೇಶ್ ಶೆಟ್ಟಿ ಎಂಬವರ ಹೆಣ್ಣು ಕರುವೊಂದನ್ನು  ರಾತ್ರಿ ಹುಲಿಯೊಂದು ದಾಳಿ ಮಾಡಿ ತಿಂದು ಹಾಕಿದೆ.
ಮಧ್ಯರಾತ್ರಿ ಸುಮಾರು ಒಂದು ಗಂಟೆಯಿಂದ ಎರಡು ಗಂಟೆಯ ನಡುವೆ ಹುಲಿಯ ದಾಳಿ ನಡೆದಿದೆ. ಮನೆಯ ಹಿಂಭಾಗದಲ್ಲಿದ್ದ ಕೊಟ್ಟಿಗೆಯ ಹೊರಭಾಗ ದಲ್ಲಿ ಕರುವನ್ನು ಕಟ್ಟಿಹಾಕಲಾಗಿತ್ತು.
ನಿದ್ರೆ ಬಾರದೆ ಮನೆಯ ಹೊರಭಾಗದಲ್ಲಿ ಕುಳಿತು ಬೀಡಿ ಸೇದುತ್ತಿದ್ದ ನೆರೆಮನೆಯ ವ್ಯಕ್ತಿಯೊಬ್ಬರು ನಾಯಿ ಬೊಗಳಿದಾಗ ಬೆಳದಿಂಗಳಿನಲ್ಲಿ ಹುಲಿಯೊಂದು ಹಟ್ಟಿಯ ಕಡೆಗೆ ಬರುತ್ತಿರುವುದನ್ನು ನೋಡಿದ್ದರು. ತನ್ನ ಮನೆಯವರನ್ನು ಎಚ್ಚರಿಸಿ ಹೊರಗೆ ಬರಬೇಕೆಂದು ಯೋಚಿಸಿದ್ದರೂ ಧೈರ್ಯ ಸಾಲದೆ ಮನೆಯ ಒಳಗೇ ಉಳಿದಿದ್ದರು.
ಕಳೆದ ವರ್ಷವೂ ಈ ಭಾಗದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಇತ್ತು. ಕೆಲವು ಮನೆಗಳ ನಾಯಿಗಳು ನಾಪತ್ತೆಯಾಗಿದ್ದವು. ಜನರು  ಭಯಭೀತರಾಗಿ ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಮಾರ್ಚ್ ತಿಂಗಳ ನಂತರ ಈ ಪರಿಸರದಲ್ಲಿ ಹರಿಯುತ್ತಿರುವ ನದಿಯ ನೀರನ್ನು ಕುಡಿಯಲು ಬರುತ್ತಿದ್ದ ಹುಲಿ, ಚಿರತೆಗಳು ಈ ಬಾರಿ ಎರಡು ತಿಂಗಳ ಮುಂಚೆಯೇ ಕಾಣಿಸಿಕೊಂಡಿವೆ.
ಮೂಡುಬಿದ್ರೆ ಅರಣ್ಯಾಧಿಕಾರಿಗಳಿಗೆ ಲೋಕೇಶ್ ಶೆಟ್ಟಿಯವರು ದೂರು ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.  ಹೆಣ್ಣು ಕರು ಸುಮಾರು ಎಂಟು ಸಾವಿರ ಬೆಲೆಯದ್ದು ಎಂದು ಅಂದಾಜಿಸಲಾಗಿದೆ. ಅರಣ್ಯಾಧಿಕಾರಿಗಳು ಹುಲಿಯ ಜಾಡನ್ನು ಪತ್ತೆ ಹಚ್ಚಿ ಅದನ್ನು ಹಿಡಿಯುವ ಪ್ರಯತ್ನ ಮಾಡಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಹುಲಿಯ ದಾಳಿ ಮಾಡಿದ ಬಗ್ಗೆ ನಿಡ್ಡೋಡಿ ಪರಿಸರದಲ್ಲಿ ಭೀತಿಯ ವಾತಾವರಣ ಉಂಟಾಗಿದ್ದು ಗ್ರಾಮಸ್ಥರು ಮುಸ್ಸಂಜೆಯಾಗುತ್ತಿದ್ದಂತೆ ಮನೆ ಸೇರುತ್ತಿರುವುದು ಕಂಡು ಬಂದಿದೆ.

Spread the love

Exit mobile version