Home Mangalorean News Kannada News ನಿರಂತರ್ – ಆಂಕ್ರಿಯಿಂದ ಕವಿತಾ ವಾಚನ, ಸಂವಾದ, ತರಬೇತಿ

ನಿರಂತರ್ – ಆಂಕ್ರಿಯಿಂದ ಕವಿತಾ ವಾಚನ, ಸಂವಾದ, ತರಬೇತಿ

Spread the love

ನಿರಂತರ್ – ಆಂಕ್ರಿಯಿಂದ ಕವಿತಾ ವಾಚನ, ಸಂವಾದ, ತರಬೇತಿ

ಉದ್ಯಾವರ: “ಸಮಾಜದಲ್ಲಿ ಬದಲಾವಣೆ ಪ್ರಾಕೃತಿಕ ನಿಯಮ. ಸಾಹಿತ್ಯದಿಂದ ಸಾಕಷ್ಟು ಸಮಾಜಿಕ ಚಳವಳಿಗಳು ರೂಪುಗೊಂಡು, ಕವಿ ಮತ್ತು ಸಾಹಿತಿಗಳು ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾಗಿದ್ದಾರೆ. ತಮ್ಮ ಬಗ್ಗೆಯೇ ಯೋಚಿಸಲು ಸಮಯವಿಲ್ಲದ ಇಂದಿನ ಒಂದು ನಿಮಿಷದ ರೀಲ್ ಕಾಲದಲ್ಲಿ, ಸಾಹಿತಿ, ಕವಿಗಳು ಸಮಾಜದ ಬಗ್ಗೆ ಯೋಚಿಸಿ, ಕವಿತೆ – ಲೇಖನಗಳ ಮೂಲಕ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಳಕಳಿ ಶ್ಲಾಘನೀಯ” ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಗುರು ವಂ| ಅನಿಲ್ ಡಿ ಸೊಜಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಅಹರ್ನಿಶಿ ಶ್ರಮಿಸುತ್ತಿರುವ ನಿರಂತರ್ ಉದ್ಯಾವರ್ ಸಾಂಸ್ಕೃತಿಕ ಸಂಘಟನೆಯ ಸ್ಥಾಪನಾ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾಹಿತ್ಯ ಶಿಬಿರ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

’ಆಂಕ್ರಿ’ ಕೊಂಕಣಿ ಜಾಲತಾಣ ಮತ್ತು ’ಆರ್ಸೊ’ ಕೊಂಕಣಿ ಪತ್ರಿಕೆಯ ಸಹಯೋಗದಲ್ಲಿ ಯುವಜನ ಮತ್ತು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಸಾಹಿತ್ಯ ಶಿಬಿರದಲ್ಲಿ ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ, ಕೊಂಕಣಿ ಸಲಹಾ ಮಂಡಳಿಯ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಕವಿತೆ ಬಗ್ಗೆ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ, ವಿಮರ್ಶಕ ಎಚ್. ಎಮ್. ಪೆರ್ನಾಲ್ ಲೇಖನ ಬರಹದ ಬಗ್ಗೆ ತರಬೇತಿ ನೀಡಿದರು.

ಖ್ಯಾತ ಕವಿ ಅರ್ಸೊ ಪತ್ರಿಕೆ ಸಂಪಾದಕ ವಿಲ್ಸನ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕಾವ್ಯ ವಾಚನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಕವಿಗಳಾದ ಕ್ಯಾಥರಿನ್ ರೊಡ್ರಿಗಸ್, ಕಟಪಾಡಿ, ಸನ್ನು ಮೋನಿಸ್, ಬೆಳ್ಳೆ, ಪೀಯುಸ್ ಜೇಮ್ಸ್, ಕರಗುಳ್ನಡೆ, ಜೀತಾ ಗೊನ್ಸಾಲ್ವಿಸ್, ಬಾರ್ಕೂರ್, ಪ್ರಮೀಳಾ ಫ್ಲಾವಿಯಾ, ಕಾರ್ಕಳ ಮತ್ತು ಸ್ಟ್ಯಾನಿ ಬೆಳಾ ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷರಾದ ವಿಲ್ಪ್ರ‍ೆಡ್ ಡಿಸೋಜಾ ಹಾಜರಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸ್ನೇಹಾಲಯ, ಪಾಲೊಟ್ಟಿ ಕನ್ಯಾಮಠದ ಮುಖ್ಯಸ್ಥೆ ಭ| ಲೀನಾ, ಸಹಾಯಕ ಗುರು ವಂ| ಸ್ಟೀಫನ್ ರೊಡ್ರಿಗಸ್, ಐಸಿವೈಎಂ ಉಡುಪಿ ವಲಯ ಅಧ್ಯಕ್ಷ ರೋವಿನ್ ಪಿರೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರಂತರ್ ಉದ್ಯಾವರ ಅಧ್ಯಕ್ಷ. ರೋಶನ್ ಕ್ರಾಸ್ತಾ ಸ್ವಾಗತಿಸಿದರು.
ಸ್ಥಾಪಕಾಧ್ಯಕ್ಷ ಸ್ಟೀವನ್ ಕುಲಾಸೊ ನಿರೂಪಿಸಿದರೆ, ಅಂಕ್ರಿ ಸಂಚಾಲಕ ಸನ್ನು ಮೋನಿಸ್ ವಂದಿಸಿದರು.


Spread the love

Exit mobile version