ನ.3-8ರ ತನಕ ಮಂಗಳೂರಿನಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್: ಸಂಜಯ್ ಮಿಶ್ರಾ
ಮಂಗಳೂರು: ಪ್ರಸಕ್ತ ವರ್ಷದ ನವೆಂಬರ್ 3ರಿಂದ 8ರ ತನಕ ಮಂಗಳೂರಿನಲ್ಲಿ ಯೋನೆಕ್ಸ್ ಸನ್ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಶನಲ್ ಚಾಲೆಂಜ್-2026 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಲಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ತಿಳಿಸಿದ್ದಾರೆ.

ನಗರದ ಉರ್ವ ಇಂಡೋರ್ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿರುವ ಬೇಸಗೆಯ ಎರಡು ತಿಂಗಳ ಯೋನೆಕ್ಸ್ ಸನ್ರೈಸ್ ಬ್ಯಾಡ್ಮಿಂಟನ್ ತರಬೇತಿ ಶಿಬಿರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಉರ್ವ ಬ್ಯಾಡ್ಮಿಂಟನ್ ಸ್ಟೇಡಿಯಂನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಂಗಳೂರಿನಲ್ಲಿ ಸತತ ಎರಡನೇ ಬಾರಿಗೆ ಅಂತರ್ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಆತಿಥ್ಯ ವಹಿಸಲು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ಗೆ ಅವಕಾಶ ನೀಡಿರುವುದಾಗಿ ಪ್ರಕಟಿಸಿದರು.
ಕಳೆದ ವರ್ಷದ ನವೆಂಬರ್ನಲ್ಲಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅತ್ಯುತ್ತಮವಾಗಿ ಅಂತರ್ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ನ್ನು ಆಯೋಜಿಸಿತ್ತು ಎಂದು ಸಂಜಯ್ ಮಿಶ್ರಾ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಆಡಿರುವ ಕರಾವಳಿಯ ಸ್ಥಳಿಯ ಆಟಗಾರರನ್ನು ಸಂಜಯ್ ಮಿಶ್ರಾ ಅವರು ಅಭಿನಂದಿಸಿದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಶೋಕ್ ಹೆಗ್ಡೆ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕೋಶಾಧಿಕಾರಿ ಲಕ್ಷ್ಮೀ ಪಿ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಕೆ.ನಿಯಾಝ್, ರಿಯಾಝ್ ಅಝರ್ ಹಸನ್, ಡಾ.ಶರತ್ ಕುಮಾರ್ ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.