Home Mangalorean News Kannada News ಪಟೇಲ್ ಪ್ರಧಾನಿಯಾಗಿದ್ದರೆ ಆರ್.ಎಸ್.ಎಸ್.ಬ್ಯಾನ್ ಮಾಡುತ್ತಿದ್ದರು; ನೆಹರು ಅದನ್ನು ತಪ್ಪಿಸಿದ್ದಾರೆ- ವೀರಪ್ಪ ಮೊಯ್ಲಿ

ಪಟೇಲ್ ಪ್ರಧಾನಿಯಾಗಿದ್ದರೆ ಆರ್.ಎಸ್.ಎಸ್.ಬ್ಯಾನ್ ಮಾಡುತ್ತಿದ್ದರು; ನೆಹರು ಅದನ್ನು ತಪ್ಪಿಸಿದ್ದಾರೆ- ವೀರಪ್ಪ ಮೊಯ್ಲಿ

Spread the love

ಪಟೇಲ್ ಪ್ರಧಾನಿಯಾಗಿದ್ದರೆ ಆರ್.ಎಸ್.ಎಸ್. ಬ್ಯಾನ್ ಮಾಡುತ್ತಿದ್ದರು; ನೆಹರು ಅದನ್ನು ತಪ್ಪಿಸಿದ್ದಾರೆ- ವೀರಪ್ಪ ಮೊಯ್ಲಿ

ಉಡುಪಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಒಂದು ವೇಳೆ ಈ ದೇಶದ ಪ್ರಧಾನಿಯಾಗಿದ್ದಿದ್ದರೆ ಆರ್ ಎಸ್ ಎಸ್ ಬ್ಯಾನ್ ಮಾಡುತ್ತಿದ್ದರು ಆದರೆ ನೆಹರೂ ಆರ್ ಎಸ್ ಎಸ್ ಮಾಡುವುದನ್ನು ತಪ್ಪಿಸಿದಿದ್ದಾರೆ ಹೀಗಿರುವಾಗಲೂ ಸಹ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಎಂ. ವೀರಪ್ಪ ಮೊಯ್ಲಿ ಹೇಳಿದರು.

ಅವರು ಶುಕ್ರವಾರ ರಾತ್ರಿ ಉಡುಪಿ ಕಿದಿಯೂರು ಹೋಟೆಲಿನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ವಾಗ್ದಾಳಿ ನಡೆಸಿದ ಮೊಯ್ಲಿ ಮೋದಿಯವರಿಗೆ ರಾಜ್ಯದಲ್ಲಿ ಬಿಜೆಪಿ ಸೋಲುತ್ತದೆ ಎಂಬುದು ಖಚಿತವಾಗಿದ್ದು ಒಟ್ಟಾರೆಯಾಗಿ ಸಭೆಗಳಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಉಡುಪಿಯಲ್ಲಿ ಮೋದಿಯವರು ಮಾಜಿ ಪ್ರಧಾನಿ ದೇವೆಗೌಡರನ್ನು ಹಾಡಿ ಹೊಗಳಿದರೆ ಅದೇ ಮೋದಿ ಬೆಂಗಳೂರಿನ ರ್ಯಾಲಿಯಲ್ಲಿ ಅವರನ್ನು ಅವಹೇಳನ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಇದೇ ಮೋದಿ ಗೌಡರ ಬಗ್ಗೆ ಮಾತನಾಡಿ ವೃದ್ಧಾಶ್ರಮಕ್ಕೆ ಸೇರಿಸಬೇಕು ಎಂದು ಹೇಳಿದ್ದರು, ಮೋದಿಯ ಮಾತಿಗೆ ಯಾವುದೇ ರೀತಿಯ ಕ್ರೆಡಿಬ್ಲಿಟಿ ಇಲ್ಲ ವೇದಿಕೆ ಹತ್ತಿದ ಕೂಡಲೇ ಸುಳ್ಳನ್ನೇ ಮಾತನಾಡುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ಈಗಾಗಲೇ 5 ವರ್ಷ ಸ್ಥಿರ ಸರಕಾರ ನೀಡಿದ್ದು ಜನಪರ ಯೋಜನೆಯನ್ನು ನಾಡಿಗೆ ನೀಡಿದ್ದು ಚುನಾವಣೆಗೆ ಜನಪರವಾದ ಪ್ರಣಾಳಿಕೆಯನ್ನು ನೀಡಿದೆ. ಮನೆಮನೆಗೆ ನೀರು ಹೊಲ ಹೊಲಕ್ಕೆ ನೀರು ಇದು ಈ ಬಾರಿಯ ಪ್ರಣಾಳಿಕೆ ಯಲ್ಲಿ ಅಳವಡಿಸುವ ಕೆಲಸಕಾರ್ಯಗಳನ್ನು ಮಾಡಿದ್ದೇವೆ. ಪಶ್ಚಿಮವಾಹಿನಿ ಯೋಜನೆ ಯಶಸ್ವಿಯಾಗಿದೆ ಡ್ಯಾಂ ನಲ್ಲಿ ನೀರು ಶೇಖರಣೆ ಯಾಗಿದೆ ಎಂದ ಮೊಯ್ಲಿ 30 ಜಿಲ್ಲೆಗೆ ವಿಭಿನ್ನ ಪ್ರಣಾಳಿಕೆ ಕೊಟ್ಟಿದ್ದು ಮಟ್ಟುಗುಳ್ಳ, ಮಲ್ಲಿಗೆ ಬೆಳೆಗೆ ವಿಶೇಷ ಬೆಂಬಲ ಕೊಡಲಾಗಿದೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಅಭಿವೃದ್ಧಿ, ಸ್ಮಾರ್ಟ್ ಫೋನ್- ಲ್ಯಾಪ್ಟಾಪ್ ಉಚಿತವಾಗಿ ಹಂಚುವ ಯೋಜನೆ ಹಾಕಲಾಗಿದೆ. ರಾಷ್ಟ್ರದ ಪ್ರಗತಿ ಕುಸಿದಿದೆ ರಾಜ್ಯದ ಪ್ರಗತಿ ಏರಿದೆ 1 ಕೋಟಿ ಉದ್ಯೋಗ, 50 ಲಕ್ಷ ಮನೆ ಕಟ್ಟುತ್ತೇವೆ ಎಂದರು.

ದೇಶದಲ್ಲಿ ದಲಿತ ವಿರೋಧಿ ವಾತಾವರಣ ಹೆಚ್ಚುತ್ತಿದ್ದು, ಮಹಿಳೆಯರಿಗೂ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ.ಬಿಜೆಪಿ ನಾಯಕರೇ ಅತ್ಯಾಚಾರದಲ್ಲಿ ತೊಡಗಿದ್ದು ಅವರನ್ನು ರಕ್ಷಿಸುವ ಕೆಲಸ ಮೋದಿಯವರು ಮಾಡುತ್ತಿದ್ದಾರೆ. ಭೃಷ್ಟಾಚಾರದ ಕುರಿತು ಮಾತನಾಡುವ ಬಿಜೆಪಿಯವರು ರೆಡ್ಡಿ ಬ್ರದರ್ಸ್ ಗೂ ಟಿಕೆಟ್ ಕೊಟ್ಟಿದ್ದಲ್ಲದೆ ರೆಡ್ಡಿ ಟೀಂ ನ ಕಿಂಗ್ ಪಿನ್ ರಾಮುಲುಗೆ ಎರಡು ಕಡೆ ಟಿಕೆಟ್ ಕೊಟ್ಟಿದ್ದಾರೆ. ಗೆಳೆಯನ ಹೆಂಡತಿಗೆ ಅತ್ಯಾಚಾರ ಮಾಡಲು ಯತ್ನಿಸಿದ ವ್ಯಕ್ತಿಗೂ ಸಹ ಬಿಜೆಪಿ ಟಿಕೇಟ್ ನೀಡಿದ್ದು ಆಂತರಿಕ ವಿಪ್ಲವ ಬಿಜೆಪಿಯಲ್ಲೇ ಜಾಸ್ತಿಯಿದೆ ಎಂದರು.

ಕಾಂಗ್ರೆಸ್ ಎಂದೂ ಕೂಡ ದಲಿತರಿಗೆ ಕಡೆಗಣಿಸಿಲ್ಲ, ಕಾಂಗ್ರೆಸ್ ಪಕ್ಷದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ವಿಚಾರದ ಕುರಿತು ಬಿಜೆಪಿಗೆ ಚಿಂತೆ ಬೇಡ. ದಲಿತ ನಾಯಕ ಖರ್ಗೆಗೆ ಅತ್ಯುತ್ತಮ ಸ್ಥಾನ ಕೊಟ್ಟಿದ್ದೇವೆ ಅಲ್ಲದೆ ಸಂಸತ್ತಿನಲ್ಲಿ ಅವರು ನಮ್ಮ ಪಕ್ಷದ ನಾಯಕನ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಅದೇ ಬಿಜೆಪಿಯಲ್ಲಿ ಎಷ್ಟು ದಲಿತ ಸಿಎಂ ಇದ್ದಾರೆ ಅಲ್ಲದೆ ಎನ್ ಡಿ ಎ ಯಲ್ಲಿ ಎಷ್ಟು ದಲಿತ ಮಂತ್ರಿ ಇದ್ದಾರೆ ಎನ್ನುವುದನ್ನು ಮೋದಿ ಮೊದಲು ಸ್ಪಷ್ಟಪಡಿಸಲಿ. ಬಿಜೆಪಿ ದೇಶಾದ್ಯಂತ ಸೋಲುತ್ತಿದೆ ಕರ್ನಾಟಕ, ರಾಜಸ್ಥಾನ, ಛತ್ತೀಸ್ ಘಡದಲ್ಲಿ ಬಿಜೆಪಿ ಇತೀಶ್ರಿ ಆಗುತ್ತದೆ ಎಂದರು.

ಬಿಜೆಪಿ ಕಾಂಗ್ರೆಸ್ ನ ಪ್ರಣಾಳಿಕೆ ನಕಲು ಮಾಡಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಇಲ 10 ಕ್ಕೂ ಹೆಚ್ಚು ಅಂಶಗಳನ್ನು ಕಾಪಿ ಮಾಡಿದ್ದಾರೆ. ಸ್ಮಾರ್ಟ್ ಫೋನ್ ಲ್ಯಾಪ್ ಟಾಪ್ ವಿಚಾರವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮೊದಲೇ ಸೇರಿಸಿದ್ದು ಅದನ್ನೆ ಬಿಜೆಪಿ ಕೂಡ ಮಾಡಿದೆ ಇದರಿಂದ ನಮ್ಮ ಪ್ರಣಾಳಿಕೆ ನೋಡಿ ಬಿಜೆಪಿ ಹತಾಶವಾಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.

ಪ್ರಧಾನಿ ಮೋದಿ ಕಳೆದ ಬಾರಿ ಕೂಡ ಕರಾವಳಿಯಲ್ಲಿ ಪ್ರಚಾರ ಮಾಡಿದ್ದಾರೆ. ಮಂಗಳೂರಿನಲ್ಲಿ 8 ಕ್ಷೇತ್ರಗಳಲ್ಲಿ 7 ಕಾಂಗ್ರೆಸ್ ಗೆದ್ದಿತ್ತು ಈ ಬಾರಿ 8 ಕ್ಷೇತ್ರವನ್ನೂ ಗೆಲ್ಲಲಿದ್ದೇವೆ ಅಲ್ಲದೆ ಉಡುಪಿಯ 5 ಕ್ಷೇತ್ರವನ್ನೂ ಗೆಲ್ಲಲಿದ್ದೇವೆ. ಮೋದಿ ಪ್ರಚಾರ ಮಾಡಿದಾಗಲೆಲ್ಲ ಕಾಂಗ್ರೆಸ್ ನ ಶಾಸಕರ ಸಂಖ್ಯೆ ಜಾಸ್ತಿ ಆಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಉಸ್ತುವಾರಿ ಜಿ ಎ ಬಾವಾ, ಕಾಂಗ್ರೆಸ್ ನಾಯಕರಾದ ಪ್ರತಾಪ್ ಚಂದ್ರ ಶೆಟ್ಟಿ, ಗೋಪಾಲ ಭಂಡಾರಿ, ಎಮ್ ಎ ಗಫೂರ್, ದಿನೇಶ್ ಪುತ್ರನ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version