ಪಡುಬಿದ್ರಿ: ಕಿಟಕಿ ಚಿಲಕ ತೆಗೆದು ಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆ ಮಾಲಿಕರು ಮಲಗಿದ್ದ ಕೋಣೆಯಲ್ಲಿದ್ದ ನಗ, ನಗದನ್ನು ಕದ್ದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಘಟನೆಯ ವಿವರ: ಕಾಪುವಿನ ಶಾಲೆಯೊಂದರಲ್ಲಿ ನಿವೃತ್ತ ಶಿಕ್ಷಕರಾದ ಪಿ ಜನಾರ್ಧನ ಭಟ್ರವರು ಅದಮಾರಿನ ತನ್ನ ಆನಂದ ನಿಲಯ ಮನೆಯ ಮಲಗುವ ಕೋಣೆಯಲ್ಲಿ ಶನಿವಾರ ರಾತ್ರಿ ಎಂದಿನಂತೆ ಮಲಗಿದ್ದರು. ಭಾನುವಾರ ಬೆಳಿಗ್ಗೆ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದು, ಆಪ್ರಯುಕ್ತ ಸುಮಾರು 80 ಗ್ರಾಂನ ಚಿನ್ನಾಭರಣವನ್ನು ಲಾಕರಿನಿಂದ ತಂದು ಮಲಗುವ ಕೋಣೆಯ ಮರದ ಬೀರುವಿನಲ್ಲಿ ಇರಿಸಿದ್ದರು. ದಂಪತಿಗಳು ಬೆಳಿಗ್ಗೆ ಎದ್ದಾಗ ಮರದ ಬೀರು ತೆರೆದಿರುವುದನ್ನು ಕಂಡು ಅವಕ್ಕಾಗಿ, ಚಿನ್ನಾಭರಣ ಇದೆಯೋ ಎಂದು ಪರೀಕ್ಷಿಸಿದಾಗ ಯಾವುದೇ ಚಿನ್ನಾಭರಣ ಕಂಡು ಬಂದಿಲ್ಲ. ತದ ನಂತರ ಪಡುಬಿದ್ರಿ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ, ಮುಖ್ಯ ದ್ವಾರದ ಚಿಲಕವನ್ನು ಕಿಟಕಿಯ ಬಾಗಿಲು ಮುರಿದು ತೆರೆದು ಒಳ ಪ್ರವೇಶಿಸಿದ ಕಳ್ಳರು ಯಾವುದೇ ಶಬ್ದ ಮಾಡದೆ ಚಿನ್ನಾಭರಣವನ್ನು ಕದ್ದಿದ್ದು, ಕಂಡು ಬಂದಿದೆ. ಮನೆಯಲ್ಲಿ ಹಲವಾರು ಬೀರುಗಳಿದ್ದರೂ, ಅದನ್ನು ಒಡೆಯದೆ, ಕೇವಲಾ ಮರದ ಬೀರುವನ್ನಷ್ಟೇ ತೆರೆದು ಚಿನ್ನಾಭರಣ ಕದ್ದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ವೃತ್ತ ನಿರೀಕ್ಷಕ ಸುನೀಲ್ ನಾಯಕ್, ಪಡುಬಿದ್ರಿ ಠಾಣಾಧಿಕಾರಿ ಅಝ್ಮತ್ ಆಲಿ,ಶ್ವಾನ ಅರ್ಜುನ್ ಆಗಮಿಸಿ ಕಳ್ಳರ ಕೆಲ ಕುರುಹುಗಳನ್ನು ಪತ್ತೆ ಮಾಡಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.