ಪತ್ರಕರ್ತರು ಉತ್ಸಾಹದ ಚಿಲುಮೆಯಾಗಿ ಕೆಲಸ ಮಾಡಬೇಕು : ಲಕ್ಷ್ಮೀ ಮಚ್ಚಿನ
ಕುಂದಾಪುರ : ಪತ್ರಕರ್ತರು ಉತ್ಸಾಹದ ಚಿಲುಮೆಯಾಗಿ ಕೆಲಸ ಮಾಡುವಂತಾಗಬೇಕು. ಪತ್ರಕರ್ತರಲ್ಲಿ ಉತ್ಸಾಹ ಕಡಿಮೆಯಾದರೆ, ಉದಾಸೀನದ ಮನೋಭಾವ ಬೆಳೆದರೆ ನಾವು ಅರ್ಧ ಸತ್ತ ಹಾಗೆ. ಆದ್ದರಿಂದ ಯಾವುದೇ ಸುದ್ಧಿಯನ್ನು ಈಗಲೇ ಮಾಡುವ, ಇವತ್ತೇ ಮಾಡುವ ನಮ್ಮಲ್ಲಿ ಉತ್ಸಾಹ ಇದ್ದರೆ ಮಾತ್ರ ನಾವು ಬೇಡಿಕೆಯ ಪತ್ರಕರ್ತರಾಗಿ ಉಳಿಯಲು ಸಾಧ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹೇಳಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬದಲಾವಣೆಯನ್ನು ಪತ್ರಕರ್ತರಿಂದ ಮಾಡಲು ಸಾಧ್ಯವಾಗುತ್ತದೆ. ಪತ್ರಕರ್ತರ ಸಂಘ ಮನೆ ಇದ್ದ ಹಾಗೆ. ಪತ್ರಕರ್ತರಿಂದ ಆಯೋಜಿಸಲ್ಪಟ್ಟ ಈ ಸಮಾರಂಭದ ಆತ್ಮೀಯ ಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪತ್ರಕರ್ತರು ಪ್ರೀತಿ ತೋರಿಸುವ ಪರಿ ಮೂಕವಿಸ್ಮಿತನನ್ನಾಗಿ ಮಾಡಿದೆ. ಪತ್ರಿಕೋದ್ಯಮದಲ್ಲಿ ಜೀವ ಸವೆಸಿದ ಅನೇಕ ಮಂದಿ ಯೋಗ್ಯರಿದ್ದರೂ ಅವರೆಲ್ಲರ ಮುಂದೆ ನಾನು ಕುಬ್ಜ. ಪತ್ರಕರ್ತರ ಒಗ್ಗಟ್ಟು ಮುರಿಯುವುದು ತುಂಬಾ ಸುಲಭವಾದರೂ ಕುಂದಾಪುರ ಸಂಘದಲ್ಲಿ ಇದೆಲ್ಲ ನಡೆಯುದಿಲ್ಲ ಎಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದರು.
ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿ, ಬದುಕು ಬಯಸಿದಂತಲ್ಲ, ಬಂದಂತೆ ಎಂಬ ಮಾತಿನಂತೆ ಬದುಕಿನಲ್ಲಿ ಏನು ಬರುತ್ತದೋ ಅದನ್ನು ಸ್ವೀಕಾರ ಮಾಡಿ ಬದುಕಬೇಕು, ಅದೇ ನಮ್ಮ ಜೀವನವಾಗಿರಬೇಕು ಎಂಬುದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಏನೆಲ್ಲಾ ತನಗೆ ಬೇಕೋ ಅದೆನೆಲ್ಲವನ್ನು ಸಿದ್ಧಿಸಿಕೊಂಡಿರುವ ಲಕ್ಷ್ಮೀ ಮಚ್ಚಿನ ಅವರು ಎಲ್ಲಾ ಜಾತಿ, ಧರ್ಮ, ರಾಜಕೀಯ ಪಕ್ಷದವರು ಪ್ರೀತಿಸುವ ವ್ಯಕ್ತಿತ್ವವುಳ್ಳಂತಹ ವ್ಯಕ್ತಿ ಎಂದರು.
ಪತ್ರಿಕಾ ಧರ್ಮದಲ್ಲಿ, ಪತ್ರಿಕಾ ಕ್ಷೇತ್ರದಲ್ಲಿದ್ದರೂ ಕೂಡ ಇಡೀ ಜಗತ್ತಿನ, ದೇಶ ಮತ್ತು ರಾಜ್ಯದ ರಾಜಕಾರಣದ, ಜಿಲ್ಲೆಯ ಮತ್ತು ರಾಜ್ಯದ ಇತರ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ನೀಡಬಲ್ಲ ಸಮರ್ಥ ವ್ಯಕ್ತಿ. ಯಾರು ಯಕ್ಷಗಾನವನ್ನು ಪ್ರೀತಿಸುತ್ತಾರೋ ಅವರು ಪ್ರತಿಯೊಬ್ಬರನ್ನೂ ಪ್ರೀತಿಸಬಲ್ಲರು ಮತ್ತು ಜಗತ್ತನ್ನು ಪ್ರೀತಿಸುತ್ತಾರೆ. ಯಕ್ಷಗಾನವನ್ನು ಪ್ರೀತಿಸುವುದರಿಂದ ನಿರಂತರವಾಗಿ ಬರೆಯಲು ಸಾಧ್ಯವಾಗುತ್ತದೆ, ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಯಕ್ಷಗಾನ ಕ್ಷೇತ್ರ ಪರಿಪೂರ್ಣ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ. ಅಂತಹ ಕ್ಷೇತ್ರದಲ್ಲಿರುವ ಲಕ್ಷ್ಮೀ ಮಚ್ಚಿನ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ನಿಜಕ್ಕೂ ಆ ಪ್ರಶಸ್ತಿಗೆ ಬೆಲೆ ಬಂದಂತಾಗಿದೆ ಎಂದು ಬಿ. ಕಿಶೋರ್ ಕುಮಾರ್ ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಾನ್ ಡಿಸೋಜ ಅಭಿನಂದನಾ ಮಾತನಾಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ), ಭಂಡಾರ್ಕರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್.ಶೆಣೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಪಸ್ಥಿತರಿದ್ದರು. ಇದೇ ಸಂದರ್ಭ ಎಸ್.ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ), ನಜೀರ್ ಪೊಲ್ಯ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಕಾರ್ಯದರ್ಶಿ ಟಿ.ಲೋಕೇಶ ಆಚಾರ್ಯ ತೆಕ್ಕಟ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಿ.ರಾಘವೇಂದ್ರ ಪೈ ಗಂಗೊಳ್ಳಿ, ಚಂದ್ರಮ ತಲ್ಲೂರು ಮತ್ತು ಯೋಗೀಶ್ ಕುಂಭಾಶಿ ಅವರನ್ನು ಗೌರವಿಸಲಾಯಿತು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್.ಬೀಜಾಡಿ ವಂದಿಸಿದರು.