Home Mangalorean News Kannada News ಪತ್ರಕರ್ತರು ಕ್ರೀಡೆಯಲ್ಲಿ ತೊಡಗಿದಾಗ ಉದ್ಯೋಗದಲ್ಲಿ ಕ್ಷಮತೆ ಸಾಧ್ಯ; ಎಸ್ಪಿ ಲಕ್ಷಣ್ ನಿಂಬರ್ಗಿ

ಪತ್ರಕರ್ತರು ಕ್ರೀಡೆಯಲ್ಲಿ ತೊಡಗಿದಾಗ ಉದ್ಯೋಗದಲ್ಲಿ ಕ್ಷಮತೆ ಸಾಧ್ಯ; ಎಸ್ಪಿ ಲಕ್ಷಣ್ ನಿಂಬರ್ಗಿ

Spread the love

ಪತ್ರಕರ್ತರು ಕ್ರೀಡೆಯಲ್ಲಿ ತೊಡಗಿದಾಗ ಉದ್ಯೋಗದಲ್ಲಿ ಕ್ಷಮತೆ ಸಾಧ್ಯ; ಎಸ್ಪಿ ಲಕ್ಷಣ್ ನಿಂಬರ್ಗಿ

ಉಡುಪಿ: ದಿನದ ಇಪ್ಪನಾಲ್ಕೂ ಗಂಟೆ ಕರ್ತವ್ಯದಲ್ಲಿರುವ ಪತ್ರಕರ್ತರು ಮತ್ತು ಪೊಲೀಸರು ಆಗಾಗ ಕ್ರೀಡೆ, ಮನೋರಂಜನೆ ಇತ್ಯಾದಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಆಗ ಮಾತ್ರ ಉದ್ಯೋಗದಲ್ಲಿ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರ್ಗಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ವತಿಯಿಂದ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಹಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪತ್ರಕರ್ತರು ಮತ್ತು ಪೊಲೀಸರು ಕರ್ತವ್ಯದ ಹಿನ್ನೆಲೆಯಲ್ಲಿ ಬಹುತೇಕ ಸಮಯ ಕುಟುಂಬಗಳಿಂದ ದೂರ ಇರಬೇಕಾಗುತ್ತದೆ. ಇದು ಅವರ ವೃತ್ತಿಯ ಮೇಲೆ ಪ್ರಭಾವ ಬೀರುತ್ತದೆ, ಆದ್ದರಿಂದ ಕುಟುಂಬ ಸಹಮಿಲನ ಕಾರ್ಯಕ್ರಮಗಳು ಕೌಟುಂಬಿಕ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡುತ್ತಾ ಪತ್ರಕರ್ತರ ಜೀವನದಲ್ಲಿ ಕ್ರೀಡಾಸ್ಪೂರ್ತಿಗೆ ಬಹಳ ಮಹತ್ವ ಇದೆ, ಕೇವಲ ಮನಸ್ಸಿನಲ್ಲಿ ಕ್ರೀಡಾಸ್ಪೂರ್ತಿ ಇದ್ದರೇ ಸಾಲದು, ದೇಹದಲ್ಲಿಯೂ ಕ್ರೀಡಾಸ್ಪೂರ್ತಿ ಇರಬೇಕು, ಆಗ ಮಾತ್ರ ಜೀವನದಲ್ಲಿ ಕ್ರೀಡಾಸ್ಪೂರ್ತಿಯಿಂದ ಬದುಕುವುದುಕ್ಕೆ ಸಾಧ್ಯವಾಗುತ್ತದೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರು, ಪತ್ರಿಕೋದ್ಯಮ ಎಂಬುದು ಅತ್ಯಂತ ಪವಿತ್ರವಾದ ವೃತ್ತಿ. ಆದಾಯದ ಹಂಗಿಲ್ಲದೇ ಸಮಾಜಕ್ಕೆ ನ್ಯಾಯವನ್ನು ಒದಗಿಸುವ, ಸಾಮಾಜಿಕ ನ್ಯಾಯವನ್ನು ರಕ್ಷಿಸುವವರು ಪತ್ರಕರ್ತರು, ಅವರಿಗೆ ಸಮಾಜವೇ ಅಭಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು, ಸಂಘದ ಹಿಂದಿನ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಪತ್ರಕರ್ತ ನಝೀರ್ ಪೋಲ್ಯ, ಅಜಿತ್ ಆರಾಡಿ ಹಾಗೂ ಇತರ ಪತ್ರಕರ್ತರ ತಂಡದಿಂದ ಸಾಂಸ್ಕೃತಿಕ ನೃತ್ಯ ಜರುಗಿದರೆ, ಇನ್ನೋರ್ವ ಪತ್ರಕರ್ತ ಇರ್ಷಾದ್ ಕಿನ್ನಿಗೋಳಿಯಿಂದ ಗಾಯನ ಜರುಗಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಮೈಕೆಲ್ ರಾಡ್ರಿಗಸ್, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೇಚ್ಚರ್, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ ರಾವ್ ವರ್ಕಾಡಿ ಕಾರ್ಯಕ್ರಮ ಸಂಯೋಜಿಸಿದರು, ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು ವಂದಿಸಿದರು.


Spread the love

Exit mobile version