Home Mangalorean News Kannada News ಪತ್ರಕರ್ತ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಡಿ’ಸೋಜಾ

ಪತ್ರಕರ್ತ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಡಿ’ಸೋಜಾ

Spread the love

ಪತ್ರಕರ್ತ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಡಿ’ಸೋಜಾ

ಉಡುಪಿ: ಪತ್ರಕರ್ತನಾದವರು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಜಾನ್ ಡಿ’ಸೋಜಾ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕಾ ದಿನದ ಗೌರವ ಸ್ವೀಕರಿಸಿ ಮಾತನಾಡಿದರು.

ಕೇವಲ ಪಠ್ಯ ವಿಷಯಕ್ಕಿಂತ ಸ್ವಾನುಭವ ಮಾಧ್ಯಮ ರಂಗದಲ್ಲಿ ಹೆಚ್ಚು ಪೂರಕ. ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸುವುದು ಜವಾಬ್ದಾರಿಯುತ ಪತ್ರಕರ್ತನ ಕರ್ತವ್ಯ. ಪತ್ರಕರ್ತರು ಕೇವಲ ಪೇಟೆ ಪಟ್ಟಣಗಳ ಸುದ್ದಿಗಳಿಗಷ್ಟೆ ಸೀಮಿತರಾಗಿರದೆ, ಗ್ರಾಮೀಣ ಪ್ರದೇಶಗಳತ್ತಲೂ ಗಮನಹರಿಸಬೇಕು. ಸಮಾಜದತ್ತ ಕಣ್ಣುಹಾಯಿಸುವ ಪತ್ರಕರ್ತನಿಂದ ಸಮಾಜೋಪಯೋಗಿ ಕಾರ್ಯ ಸಾಧ್ಯ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ ಅವರು ಎಲ್ಲ ಕ್ಷೇತ್ರಗಳಂತೆ ಪತ್ರಿಕಾ ರಂಗದಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅಂಥ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಪತ್ರಿಕೋದ್ಯಮ ಬಗ್ಗೆ ಚಿಂತನ- ಮಂಥನ ಮಾಡಿಕೊಳ್ಳಬೇಕು. ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದಿನ ಹವ್ಯಾಸ ಬೆಳೆಸಿಕೊಂಡು ಹೆಚ್ಚೆಚ್ಚು ವಿಷಯ ಸಂಗ್ರಹಿಸಿ ವಸ್ತುನಿಷ್ಠವಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ರೋಹಿಣಿ ಕಿವಿಮಾತು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಹರೀಶ ಆದೂರು, ಮಾಧ್ಯಮ ರಂಗ ಬೆಳೆದ ಪರಿಯನ್ನು ವಿವರಿಸಿದರು. ಜಾಹೀರಾತು ಮತ್ತು ಸುದ್ದಿಯ ನಡುವಿನ ತೆಳುಪರದೆಯ ನಡುವೆಯೂ ಓದುಗರಿಗೆ ಪತ್ರಿಕೆ ಸಾಕಷ್ಟು ಧನಾತ್ಮಕ ವಿಚಾರಗಳನ್ನು ತಿಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕ, ವಿಶಿಷ್ಟಚೇತನ ವ್ಯಕ್ತಿತ್ವದ ಹರೀಶ ಭಟ್ ಬೈಲೂರು ಮತ್ತು ಬಾಲನಟ ಪ್ರಶಸ್ತಿ ಪುರಸ್ಕøತ ಅನೀಶ್ ಪ್ರಸಾದ್ ಪಾಂಡೇಲು ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ  ಪತ್ರಕರ್ತರ ಮಕ್ಕಳನ್ನು ಅಭಿನಂದಿಸಲಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿನಿಯೋರ್ವಳಿಗೆ ಸಹಾಯಧನ ನೀಡಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶಪ್ರಸಾದ ಪಾಂಡೇಲು ಸ್ವಾಗತಿಸಿ, ಕೋಶಾಧಿಕಾರಿ ರಾಜೇಶ ಶೆಟ್ಟಿ ವಂದಿಸಿದರು. ಚೇತನ ಪಡುಬಿದ್ರಿ ಇದ್ದರು. ಪಲ್ಲವಿ ಸಂತೋಷ್ ನಿರೂಪಿಸಿದರು.


Spread the love

Exit mobile version