Home Mangalorean News Kannada News ಪನ್ವೆಲ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಮಾಲೋಚನೆ ಸಭೆ 

ಪನ್ವೆಲ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಮಾಲೋಚನೆ ಸಭೆ 

Spread the love

ಪನ್ವೆಲ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಮಾಲೋಚನೆ ಸಭೆ 
 

ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.17ರಂದು ಮುಂಬಯಿಗಾಗಮಿಸಿದ ಸಂದರ್ಭದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮ ಕಲಶ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನವಿ ಮುಂಬಯಿಯ ನ್ಯೂ ಪನ್ವೆಲ್ ಪೂರ್ವ ದ ಭಗತ್ ವಾಡಿಯ ಹೋಟೆಲ್ “ಸ್ಪೈಸ್ ವಾಡಿ”ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತುಳು ಕನ್ನಡಿಗರೊಂದಿಗೆ ಸಮಾಲೋಚನೆ ಸಭೆ ನಡೆಯಿತು.

ಜಿಲ್ಲೆಯ ಪನ್ವಲ್ ಪರಿಸರ ಹಾಗೂ ಮುಂಬಯಿಯ ವಿವಿಧ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು.

ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದುದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ದೇಶ ರಕ್ಷಣೆಯ ಸೇವೆ ಗೈದು ರಾಜಕೀಯದ ಮೂಲಕ ದೇಶ ಸೇವೆ ಮಾಡುತ್ತಿರುವ ಬ್ರಿಜೇಶ್ ಚೌಟರು, ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಸಂದೇಹವಿಲ್ಲ. ನಾವೆಲ್ಲರೂ ಅವರ ಅಭಿಮಾನಿಗಳಾಗಿದ್ದೇವೆ. ಇಂದು ನಾವು ನಮ್ಮ ದೇಶಕ್ಕಾಗಿ ಒಟ್ಟಾಗಿದ್ದೇವೆ, ನಮಗೆ ಜಾತಿ ಮುಖ್ಯವಲ್ಲ, ದೇಶ ಮುಖ್ಯ. ಇಲ್ಲಿರುವ ನಾವು ನಮ್ಮ ಊರಿನವರಿಗೆ ತಿಳಿಸಿದಲ್ಲಿ ಖಂಡಿತವಾಗಿ ನಮ್ಮ ಮಾತನ್ನು ಕೇಳುತ್ತಾರೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರಿಗೆ ನಮ್ಮೆಲ್ಲರ ಪ್ರೋತ್ಸಾಹ ಅತೀ ಅಗತ್ಯ ಎಂದರು.

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ನಮ್ಮ ಊರನ್ನು ಪ್ರತಿನಿಧೀಕರಿಸಲು ಅವಕಾಶ ಸಿಕ್ಕಿದ ಈ ಸಂಭ್ರವನ್ನು ನೋಡುವುದೇ ಒಂದು ಖುಷಿ. ಮಧ್ಯಮ ವರ್ಗದಿಂದ ಬಂದವ ನಾನು. ದಕ್ಷಿಣ ಕನ್ನಡ ಜಿಲ್ಲೆ ಒಂದು ಪ್ರತಿಷ್ಠಿತ ಲೋಕಸಭಾ ಕ್ಷೇತ್ರ. ತುಳುನಾಡನ್ನು ಪ್ರತಿನಿಧಿಕರಿಸುವ ಅವಕಾಶ ಸಿಕ್ಕಿದ್ದು ಅದು ತುಳುನಾಡಿನ ಮಣ್ಣಿನ ಧೈವ ದೇವರ ಆಶೀರ್ವಾದ. ನಮ್ಮ ಪಕ್ಷದ ಕಾರ್ಯಕರ್ತರ ಪ್ರೀತಿ ಮತ್ತು ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನಾವು ಒಟ್ಟಾಗೊ ಸಂಕಲ್ಪ ಮಾಡಿದಲ್ಲಿ ಅದು ಸಿದ್ಧಿಯಾಗುತ್ತದೆ. ಎಂಟು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಜನಾಂಗ ನಾಡನ್ನು ಬಿಟ್ಟು ದೇಶ ವಿದೇಶಗಳಿಗೆ ಉದ್ಯೋಗ ನಿಮಿತ್ತ ಹೋಗುತ್ತಿದ್ದು ಅವರ ಮನೆಗೆ ಹೋದಲ್ಲಿ ಪ್ರಾಯದವರು ಮಾತ್ರ ಇದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿದವರಿಗೆ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುನರ್ಜನ್ಮದ ಅವಕಾಶ ಸಿಗುತ್ತದೆ. ದಕ್ಷಿಣ ಕನ್ನಡ ನಿಜವಾಗಿಯೂ ದೇವರ ಭೂಮಿ. ನನಗೆ ಜವಾಬ್ದಾರಿ ಇರುವ ತನಕ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಷ್ಟ್ರದ ಒಂದು ಪ್ರಗತಿಶೀಲ ಹಾಗೂ ಅಭಿವೃದ್ಧಿ ಶೀಲ ಜಿಲ್ಲೆಯಾಗಿ ಪರಿವರ್ತಿಸಬೇಕಾಗಿದೆ. ನಮ್ಮದು ಸಂಪತ್ಭರಿತವಾದ ಜಿಲ್ಲೆ. ನಮ್ಮ ಜಿಲ್ಲೆಯಲ್ಲಿ ಎಲ್ಲಾ ಸೌಲಭ್ಯ ಇದ್ದು, ಉದ್ಯೋಗ ಶೃಷ್ಟಿಸುವ ಉದ್ಯಮ ಮವನ್ನು ಬೆಳೆಸಿದಲ್ಲಿ ಯುವ ಜನಾಂಗವು ಉದ್ಯೋಗಕ್ಕಾಗಿ ಹೊರಗೆ ಹೋಗಬೇಕಾಗಿಲ್ಲ ಎಂದರು.

ಸ್ಥಳೀಯ ಶಾಸಕ ಪ್ರಶಾಂತ್ ಠಾಕೂರು ಅವರು ಮಾತನಾಡುತ್ತಾ ಮುಂಬಯಿಯಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರೊಂದಿಗೆ ನಾವೆಲ್ಲರಿದ್ದು ಬ್ರಿಜೇಶ್ ಚೌಟ ರಿಗೆ ಬೆಂಬಲ ನೀಡೋಣ. ಇದರ ಮೂಲಕ ಸರಕಾರದ ಮುಂದಿನ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರೋಣ ಎನ್ನುತ್ತಾ ಶುಭ ಹಾರೈಸಿದರು.

ನವಿ ಮುಂಬೈಯ ನೆರೊಲ್ ನಲ್ಲಿ ಕಾಂಗ್ರೆಸ್ ಪಕ್ಷ ದಲ್ಲಿ ನಗರ ಸೇವಕಿಯಾಗಿ ಜನಸಾಮಾನ್ಯರ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅನಿತಾ ಸಂತೋಷ್ ಶೆಟ್ಟಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಇವರನ್ನು ಶಾಸಕ ಪ್ರಶಾಂತ್ ಠಾಕೂರು , ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂತೋಷ್ ಜಿ ಶೆಟ್ಟಿ ಅವರು ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಿವಿಧ ಜಾತಿಯ ಸಂಘ-ಸಂಸ್ಥೆ ಪದಾಧಿಕಾರಿಗಳು ಸ್ಥಳೀಯ ಸಮಾಜ ಸೇವಕರು ನವಿ ಮುಂಬಯಿ ನೆರೂಲ್ ಮಾಜಿ ನಗರ ಸೇವಕಿ ಅನಿತಾ ಸಂತೋಷ್ ಶೆಟ್ಟಿ ಮತ್ತಿತರ ಮುಖಂಡರು ಉಪಸ್ಥರಿದ್ದರು, ಕಾರ್ಯಕ್ರಮವನ್ನು ಅಶ್ವಿನ್ ಶೆಟ್ಟಿ ನಿರೂಪಿಸಿ ವಂದಿಸಿದರು,

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡಿದ್ದರು.


Spread the love

Exit mobile version