ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಸಹಯೋಗದಲ್ಲಿ ಅಕ್ಟೋಬರ್ 29 ಮತ್ತು 30 ರಂದು ಬಿ.ಎಡ್, ಪದವಿಪೂರ್ವ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಬುಧವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಿಲಿಕುಳದಲ್ಲಿ ಪ್ರಕೃತಿ ಸಂರಕ್ಷಣಾ ಕಾರ್ಯವು ನಿರಂತರವಾಗಿ ನಡೆಯುತ್ತಿದೆ ಹಾಗೂ ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಪ್ರಯತ್ನಗಳು ನಡೆಯುತ್ತಿವೆ. ಸಮಾಜದ ಎಲ್ಲಾ ವರ್ಗಕ್ಕೂ ಸೂಕ್ತವಾಗುವ ಪ್ರಕೃತಿ ಸಂಬಂಧಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಪ್ರಕೃತಿಯ ಸಂರಕ್ಷಣೆ ಬಗ್ಗೆ ತುರ್ತು ಕ್ರಮಗಳ ಅನಿವಾರ್ಯತೆ ಇದೆ. ಪ್ರಕೃತಿಯೇ ಪ್ರಗತಿ ಎಂಬ ಧ್ಯೇಯ ವಾಕ್ಯ ನಮ್ಮದಾಗಿರಬೇಕು. ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಕೈಗಾರಿಕಾ ಸಂಸ್ಥೆಗಳು ಇಲ್ಲಿ ಅಭಿವೃದ್ಧಿಯಾದಾಗ ಪರಿಸರದ ಕಾಳಜಿ ಗಮನದಲ್ಲಿ ಇರಬೇಕು ಎಂದು ಹೇಳಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರದ ನಿರ್ದೇಶಕ ಡಾ. ಕೆ.ವಿ ರಾವ್ ಮಾತನಾಡಿ, ವಾತಾವರಣ ಬದಲಾವಣೆಯ ಪರಿಣಾಮಗಳು ನಾವು ಅತ್ಯಗತ್ಯವಾಗಿ ಅನುಸರಿಸಬೇಕಾದ ಪರಿಹಾರೋಪಾಯಗಳು ಹಾಗೂ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ವಿವರಿಸಿದರು. ಸಮಾಜದ ಸ್ವಾಸ್ಥ್ಯ ಮುಂದಿನ ಜನಾಂಗಕ್ಕೆ ದೊರಕಬೇಕಾದರೆ ಬದುಕಲು ಹಾಗೂ ಇತರರನ್ನು ಬದುಕಲು ಬಿಡುವ ಸಾಮರಸ್ಯವನ್ನು ಪಾಲಿಸಬೇಕು ಎಂದು ಹೇಳಿದರು.
ಪಿಲಿಕುಳದ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠಿ ಇವರು ಪಶ್ಚಿಮ ಘಟ್ಟಗಳ, ಸಸ್ಯ ಸಂಕುಲಗಳ ಮಹತ್ವ, ಔಷಧೀಯ ಗುಣಗಳು ಮತ್ತು ಸಂರಕ್ಷಣೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಸಸ್ಯಕಾಶಿ ವಿಭಾಗದ ಉದಯ್ ಕುಮಾರ್ ಶೆಟ್ಟಿ ಔಷಧಿ ಗಿಡಮೂಲಿಕೆಗಳ ಪಾರಂಪರಿಕ ಮಾಹಿತಿಯನ್ನು ನೀಡುವುದರ ಜೊತೆಗೆ ಉದ್ಯಾನವನದಲ್ಲಿರುವ ಔಷಧೀಯ ಸಸ್ಯಗಳ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಸುಮಾರು 250 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಪ್ರತಿನಿಧಿಗಳಾದ ಶಿವರಾಜ್ ಕೆ.ಎಮ್ ಮತ್ತು ಚೇತನ್ ಕುಮಾರ್ ಭಾಗವಹಿಸಿದ್ದರು.
ಶೈಕ್ಷಣಿಕ ಸಹಾಯಕಿ ಕು.ರಶ್ಮಿ ಸ್ವಾಗತಿಸಿ, ಇನ್ನೋವೇಶನ್ ಹಬ್‍ನ ಮೆಂಟರ್ ಅಂಬಿಕಾ ವಂದಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರ್ವಹಿಸಿದರು.