ಪುತ್ತೂರು| ಕಾರು-ಆಟೋ ನಡುವೆ ಭೀಕರ ಅಪಘಾತ: ನಾಲ್ಕೂವರೆ ವರ್ಷದ ಕಂದಮ್ಮಸಹಿತ ಇಬ್ಬರ ಮೃತ್ಯು
ಪುತ್ತೂರು : ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿಯಲ್ಲಿ ಶನಿವಾರ ಸಂಜೆ ಕಾರು ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ರಾತ್ರಿ ಮಗುವಿನ ಅಜ್ಜಿ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬನ್ನೂರು ನಿವಾಸಿ ಹನೀಫ್ ಅವರ ಮಗಳು ಶಾಝ್ವಾ ಫಾತಿಮಾ (4 ವರ್ಷ 6 ತಿಂಗಳು) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ಬೊಳುವಾರು ಕಾಪಿಕಾಡ್ ನಿವಾಸಿ ಝುಲೈಕಾ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬನ್ನೂರು ನಿವಾಸಿ ಹನೀಫ್ ಅವರು ನೀಡಿದ ದೂರಿನಲ್ಲಿ, ಸುಮಾರು 4.15ಕ್ಕೆ ತಮ್ಮ ಕುಟುಂಬದವರಾದ ಪತ್ನಿ, ಅತ್ತೆ, ಭಾವನ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ KA-21-C-3491 ಆಟೋ ರಿಕ್ಷಾದಲ್ಲಿ ಕುಟುಂಬದೊಂದಿಗೆ ಬೊಳುವಾರಿನಿಂದ ಪುತ್ತೂರಿನತ್ತ ಬರುತ್ತಿದ್ದ ಸಂದರ್ಭದಲ್ಲಿ ಎದುರುನಿಂದ ಬಂದ TN-72-BL-1759 ನಂಬರಿನ ಕಾರು ಚಾಲಕ ತಮಿಳುನಾಡು ಮೂಲದ ಲಕ್ಷ್ಮಿಬದಿರಾಜು ಎಂಬಾತ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತಪ್ಪು ಬದಿಯಲ್ಲಿ ಕಾರು ಓಡಿಸಿ ರಿಕ್ಷಾಗೆ ಢಿಕ್ಕಿ ಹೊಡೆದಿದ್ದಾರೆ.
ಈ ಘಟನೆಯಲ್ಲಿ ಹನೀಫ್ ಅವರ ಮಗಳು ಶಾಝ್ವಾ ಫಾತಿಮಾ (4ವರ್ಷ 6ತಿಂಗಳು) ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡು ಮಂಗಳೂರು ಕೆಎಂಸಿ ಆಸ್ಪತ್ರಗೆ ದಾಖಲಿಸಲಾಗಿದ್ದ ಹನೀಫ್ ಅವರ ಪತ್ನಿಯ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
