Home Mangalorean News Kannada News ಪುತ್ತೂರು| ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಯುವಕನ ವಿರುದ್ಧ ಪ್ರಕರಣ ದಾಖಲು

ಪುತ್ತೂರು| ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಯುವಕನ ವಿರುದ್ಧ ಪ್ರಕರಣ ದಾಖಲು

Spread the love

ಪುತ್ತೂರು| ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಯುವಕನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ವಿವಾಹವಾಗಲು ನಿರಾಕರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನೋರ್ವನ ವಿರುದ್ಧ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಯುವತಿಯ ದೂರಿನಂತೆ ಆರೋಪಿ ಯುವಕನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ಪುತ್ತೂರಿನ ಬಪ್ಪಳಿಗೆ ನಿವಾಸಿ ಬಿಜೆಪಿ ಮುಖಂಡ ಹಾಗೂ ವಾಸ್ತುಶಿಲ್ಪಿ ಪಿ.ಜಿ ಜಗನ್ನಿವಾಸ್ ರಾವ್ ಎಂಬವರ ಪುತ್ರ ಪಿ.ಜಿ ಕೃಷ್ಣ ಜೆ. ರಾವ್ (21) ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನಿಂದ ವಂಚನೆಗೆ ಒಳಗಾದ ಯುವತಿಯೂ ಪುತ್ತೂರಿನ ನಿವಾಸಿಯಾಗಿದ್ದು, ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆರೋಪಿಯು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯುವತಿಯನ್ನು ಮನೆಗೆ ಕರೆತಂದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ನೊಂದ ಯುವತಿ ಜೂ. 24ರಂದು ರಾತ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಕೃಷ್ಣ ರಾವ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ದೂರಿನಲ್ಲಿ ತಿಳಿಸಿರುವಂತೆ 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಕೃಷ್ಣ ರಾವ್, ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದು, ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದು, ಯುವತಿ ವಿರೋಧಿಸಿದಾಗ ಮದುವೆಯಾಗುವುದಾಗಿ ನಂಬಿಸಿದ್ದ ಹಾಗೂ ಈ ವಿಷಯವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದ. ಬಳಿಕ ಜನವರಿ ತಿಂಗಳಲ್ಲಿ ಮತ್ತೆ ಮನೆಗೆ ಕರೆಸಿ ಕೊಂಡು ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದರಿಂದಾಗಿ ಯುವತಿ ಗರ್ಭವತಿಯಾಗಿದ್ದು, ಈ ವಿಚಾರವನ್ನು ತನ್ನ ತಂದೆ ತಾಯಿಗೆ ತಿಳಿಸಿದ್ದಾಳೆ. ಬಳಿಕ ಮನೆಯವರು ಯುವಕನ ಮನೆಯವರಿಗೆ ವಿಚಾರ ತಿಳಿಸಿದಾಗ ಮಾತುಕತೆ ನಡೆದು ಮದುವೆಗೆ ಹುಡುಗನ ಕಡೆಯವರು ಒಪ್ಪಿಗೆ ನೀಡಿದ್ದರು ಎಂದು ಯುವತಿ ತಿಳಿಸಿದ್ದಾಳೆ. ಆದರೆ, ಈಗ ಯುವತಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಕೃಷ್ಣ ರಾವ್ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69 ರಂತೆ ಪ್ರಕರಣ ದಾಖಲಿಸಿ ಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ಜೆ. ರಾವ್ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


Spread the love

Exit mobile version