ಪೆರಿಯಡ್ಕ: ವಿದ್ಯಾರ್ಥಿಗಳ ಮೇಲೆ ಹಲ್ಲೆ – ಇಬ್ಬರು ಯುವಕರ ಬಂಧನ
ಉಪ್ಪಿನಂಗಡಿ: ವಿದ್ಯಾರ್ಥಿಗಳ ಮೇಲೆ ಕೋಮುದ್ವೇಷದಿಂದ ಹಲ್ಲೆ ನಡೆಸಿದ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಪಿರ್ಯಾದಿದಾರರು ಪದವಿ ವಿದ್ಯಾರ್ಥಿಯಾಗಿದ್ದು, ಅವರ ಸಹಪಾಠಿಯೊಬ್ಬ ಇತ್ತೀಚೆಗೆ ಅನಾರೋಗ್ಯದಿಂದ ಮನೆಯಲ್ಲಿದ್ದರು. ಆತನ ಆರೋಗ್ಯ ವಿಚಾರಿಸಲು ಪಿರ್ಯಾದಿದಾರರು ಹಾಗೂ ಒಟ್ಟು 9 ಮಂದಿ ಸಹಪಾಠಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ನವೆಂಬರ್ 6, 2025 ರಂದು ಬೆಳಿಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರು.
ಆ ವೇಳೆ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ, ಅವರ ಹೆಸರು, ಕಾಲೇಜು ಮತ್ತು ಊರಿನ ಬಗ್ಗೆ ವಿಚಾರಿಸಿದರು. ವಿಭಿನ್ನ ಕೋಮುಗಳ ವಿದ್ಯಾರ್ಥಿಗಳು ಸೇರಿ ತೆರಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕೋಮುದ್ವೇಷದಿಂದ ಅವಾಚ್ಯ ಶಬ್ದಗಳಲ್ಲಿ ಬೈದು, ಒಬ್ಬ ವಿದ್ಯಾರ್ಥಿಗೆ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.
ಆರೋಪಿತರಾದ ಮುಸ್ತಾಫ ಮತ್ತು ಸಹಸವಾರ ಮುಸ್ತಾಫ ಪೆರಿಯಡ್ಕ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ: 107/2025) ದಾಖಲಿಸಿದ್ದು, ಬಿಎನ್ಎಸ್ 2023 ರ ಕಲಂ 126(2), 352, 351(2), 115(2), 353(2) ಅನ್ವಯ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ಆರೋಪಿತರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
