Home Mangalorean News Kannada News ಪೊಲೀಸರು ಮತ್ತು ಪತ್ರಕರ್ತರದ್ದು ‘ಥ್ಯಾಂಕ್ಸ್ ಲೆಸ್’ ಕಾರ್ಯ: ಎಎಸ್ಪಿ ಸಿದ್ಧಲಿಂಗಪ್ಪ

ಪೊಲೀಸರು ಮತ್ತು ಪತ್ರಕರ್ತರದ್ದು ‘ಥ್ಯಾಂಕ್ಸ್ ಲೆಸ್’ ಕಾರ್ಯ: ಎಎಸ್ಪಿ ಸಿದ್ಧಲಿಂಗಪ್ಪ

Spread the love

ಪೊಲೀಸರು ಮತ್ತು ಪತ್ರಕರ್ತರದ್ದು ‘ಥ್ಯಾಂಕ್ಸ್ ಲೆಸ್’ ಕಾರ್ಯ: ಎಎಸ್ಪಿ ಸಿದ್ಧಲಿಂಗಪ್ಪ

ಕುಂದಾಪುರ: ಸಮಾಜದ ಹಿತಕ್ಕಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರು ಹಾಗೂ ಪತ್ರಕರ್ತರದ್ದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದೂ ಪರಿಶ್ರಮ ದೊಡ್ಡದು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕುಂದಾಪುರ ತಾಲೂಕು ಸಂಘದ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು.

ಸರಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಕನ್ನಡ ಭಾಷೆ ಅದರಲ್ಲೂ ಕುಂದಾಪ್ರ ಕನ್ನಡ ವಿಶಿಷ್ಟಪೂರ್ಣವಾಗಿದೆ, ಇಲ್ಲಿ ಗ್ರಾಮಮಟ್ಟದಲ್ಲಿ ಕನ್ನಡ ತನ್ನ ಛಾಪನ್ನು ಇನ್ನೂ ಉಳಿಸಿಕೊಂಡಿದೆ. ಪತ್ರಕರ್ತರ ಸಂಘ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿಯೇ ಸ್ಪರ್ಧೆ ಆಯೋಜಿಸಿದ್ದು ಖುಷಿಕೊಟ್ಟಿದೆ ಎಂದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಪೊಲೀಸರ ಬಗೆಗಿನ ವಿಷಯವನ್ನು ಆಯ್ದುಕೊಂಡು ಮಕ್ಕಳಿಗೆ ಪೊಲೀಸರ ಬಗ್ಗೆ ತಿಳಿಯುವ ಅವಕಾಶ ಒದಗಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.

ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಈ ಸ್ಪರ್ಧೆಯ ಮೂಲಕ ಮಕ್ಕಳು ವಿಭಿನ್ನವಾಗಿ ಯೋಚಿಸುವಂತೆ ಮಾಡಿ, ಅವರ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಪ್ರಯತ್ನವಾಗಿದೆ ಎಂದು ಸಂಘವನ್ನು ಅಭಿನಂದಿಸಿದರು.

ತಾಲೂಕು ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರ. ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಷರೀಫ್ ಮಾತನಾಡಿದರು.

ತೀರ್ಪುಗಾರರಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಲೇಖಕಿ ಪೂರ್ಣಿಮಾ ಕಮಲಶಿಲೆ ಹಾಗೂ ಹೆಸ್ಕತ್ತೂರು ಸರಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಅಶೋಕ ತೆಕ್ಕಟ್ಟೆ ಅನುಭವ ಹಂಚಿಕೊಂಡರು. ಬಹುಮಾನ ವಿಜೇತರಾದ ಪ್ರಗತಿ ಆರ್. ಅಮಿನ್, ಪ್ರತೀಕ್ಷಾ, ಹರ್ಷಿಣಿ ಅನಿಸಿಕೆ ವ್ಯಕ್ತಪಡಿಸಿದರು.

ಕುಂದಾಪುರ ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಸದಸ್ಯ ಪ್ರಶಾಂತ್ ಪಾದೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಪತ್ರಕರ್ತರಾದ ಶ್ರೀಕಾಂತ್ ಹೆಮ್ಮಾಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.


ಬಹುಮಾನ ವಿಜೇತರು
ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯ ಪ್ರಗತಿ ಆರ್. ಅಮಿನ್ ಪ್ರಥಮ, ಬಸ್ರೂರು ಸರಕಾರಿ ಪ್ರೌಢಶಾಲೆಯ ಪ್ರತೀಕ್ಷಾ ದ್ವಿತೀಯ ಹಾಗೂ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಹರ್ಷಿಣಿ ತೃತೀಯ ಬಹುಮಾನ ಪಡೆದಿದ್ದಾರೆ.

ಕಾಳಾವರ ಸರಕಾರಿ ಪ್ರೌಢಶಾಲೆಯ ರಾಧಿಕಾ, ದೀಕ್ಷಾ, ಸಾಹಿತ್ಯ, ಆರ್ಡಿ- ಅಲ್ಬಾಡಿ ಸರಕಾರಿ ಪ್ರೌಢಶಾಲೆಯ ಶ್ರಾವ್ಯ, ಶಂಕರನಾರಾಯಣ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅನನ್ಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಸ್ಪಂದನಾ ಉಳ್ಳೂರು, ಶ್ರೀಶಾಂತ್, ವಕ್ವಾಡಿ ಸರಕಾರಿ ಪ್ರೌಢಶಾಲೆಯ ಸೃಷ್ಟಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ನವ್ಯಾ, ಕೋಟೇಶ್ವರ ಕೆಪಿಎಸ್ನ ಶ್ರೀಲಕ್ಷ್ಮಿ, ಕೆದೂರು ಸರಕಾರಿ ಪ್ರೌಢಶಾಲೆಯ ಅನುಶ್ರೀ, ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಶ್ರಾವ್ಯ, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಅರ್ಚನಾ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.


Spread the love

Exit mobile version