Home Mangalorean News Kannada News ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ; ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಂಧನ

ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ; ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಂಧನ

Spread the love

ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ; ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಂಧನ

 ಕೋಟ: ಬಹುಭಾಷಾ ನಟ, ಪ್ರಕಾಶ ರೈ ಅವರಿಗೆ ಕಾರಂತ ಹುಟ್ಟೂರು ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಮಂಗಳವಾರದಂದು ಉಡುಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೋಟ ಥೀಂ ಪಾರ್ಕ್‍ನತ್ತ ಮುನ್ನುಗ್ಗಲು ಪ್ರಯತ್ನಿಸಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರನ್ನು ರಾಷ್ಟೀಯ ಹೆದ್ದಾರಿ 66 ರಲ್ಲೆ ಪೋಲಿಸರು ಬಂಧಿಸಿ ವಶಕ್ಕೆ ಪಡೆದರು.

 ಕೋಟದ ಕಾರಂತ ಥೀಂ ಪಾರ್ಕ್ ಸಂಪರ್ಕ ರಸ್ತೆ ಬಳಿ ಜಮಾಯಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆಗೆ ಮುಂದಾದರು.  ಕೂಡಲೇ ಪೋಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

 ಇವೆಲ್ಲದರ ನಡುವೆ ನಟ ಪ್ರಕಾಶ ರೈ ಅವರನ್ನು ಉಡುಪಿ ಸಂತೆಕಟ್ಟೆಯಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.

 ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ವಿಶೇಷ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಮುಂಜಾನೆಯಿಂದಲೇ ಸುಮಾರು 160ಕ್ಕೂ ಅಧಿಕ ಪೋಲೀಸರು ಕಾರಂತ ಥೀಂ ಪಾರ್ಕ್ ಬಂದೋಬಸ್ತಿನಲ್ಲಿ ತೊಡಗಿದ್ದರು. ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್‍ನ ಭದ್ರತೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನದ ಕುರಿತು ಕೆಲ ದಿನಗಳ ಹಿಂದೆ ಡಿವೈಎಫ್ ರಾಜ್ಯ ಸಮ್ಮೇಳನದಲ್ಲಿ ನಟ ಪ್ರಕಾಶ್ ರೈ ಟೀಕಿಸಿದ್ದರು. ಮೋದಿಯನ್ನು ಟೀಕಿಸಿದ್ದ ರೈ ವಿರುದ್ದ ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು ರೈ ಪ್ರಶಸ್ತಿ ಸ್ವೀಕರಿಸಲು ಬಂದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂಬ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಕಾರಂತ ಥೀಂ ಪಾರ್ಕ್‍ನ ಹುಟ್ಟೂ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು. ಸಾಕಷ್ಟು ಮುಂಜಾಗ್ರತೆ ಮತ್ತು ಪೊಲೀಸ್ ಭದ್ರತೆಯ ನಡುವೆಯೂ ಕೂಡ ನೂರಾರು ಜನ ಅಭಿಮಾನಿಗಳು ಕಾರ್ಯಕ್ರಮ ವಿಕ್ಷೀಸಿ ಆನಂದಿಸಿದರು.

 


Spread the love

Exit mobile version