Home Mangalorean News Kannada News ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು

ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು

Spread the love

ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಜನರಲ್ಲಿ ಧಾರ್ಮಿಕ ದ್ವೇಷ ಉಂಟಾಗುವಂತೆ ಭಾಷಣ ಮಾಡಿ ಸೌಹಾರ್ದತೆಗೆ ಭಂಗ ತಂದ ಆರೋಪದಡಿ ಬಿಜೆಪಿ ನಾಯಕ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ವಿರುದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳದ ಕಾಂಗ್ರೆಸ್ ನಾಯಕರೊಬ್ಬರು ಸುನೀಲ್ ಕುಮಾರ್ ಅವರ ವಿರುದ್ದ ದೂರು ನೀಡಿದ್ದು ಅವರ ದೂರಿನ ಮೇರೆಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುನೀಲ್ ಕುಮಾರ್ ಅವರು ಕಲ್ಲಡ್ಕದಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ಸಾರ್ವಜನಿಕ ಸಭೆಯಲ್ಲಿ  ಬಂಟ್ವಾಳದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವಿನ ಸ್ಪರ್ಧೆ ಅಲ್ಲ. ಇದು ಅಲ್ಲಾಹ್-ರಾಮನ ಸಮರ. ಈ ಚುನಾವಣೆ ಹಿಂದೂಗಳಿಗೆ ಸ್ವಾಭಿಮಾನದ ಪ್ರಶ್ನೆ. ಈ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿರುವ ಶಾಸಕರು ನಾನು ಅಲ್ಲಾನ ಕೃಪೆಯಿಂದಾಗಿ ಆಯ್ಕೆಯಾಗಿದ್ದೇನೆ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 6 ಬಾರಿ ಗೆದ್ದ ವ್ಯಕ್ತಿ ನಮಗೆ ಹಿಂದೂಗಳ ಮತ ಬೇಡ ಎನ್ನುತ್ತಾರೆ ಎಂದರೆ ಇದು ನಮಗೆ ಮರ್ಯಾದೆಯ ಪ್ರಶ್ನೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ನಿಮಗೆ ರಾಮ ಬೇಕೋ ಅಥವಾ ಅಲ್ಲಾ ಬೇಕೋ ಎಂಬುವುದನ್ನು ನೀವೇ ತೀರ್ಮಾನ ಮಾಡಿ ಎಂದಿರುವ ಸುನೀಲ್ ಕುಮಾರ್, ಅಲ್ಲಾನನ್ನು ಗೆಲ್ಲಿಸುತ್ತೀರಾ ಅಥವಾ ರಾಮನನ್ನು ಪ್ರೀತಿಸೋ ವ್ಯಕ್ತಿಯನ್ನು ಗೆಲ್ಲಿಸುತ್ತೀರಾ ಎಂದು ವಿವಾದದ ಕಿಡಿ ಹಚ್ಚಿದ್ದಾರೆ.

ಅಲ್ಲಾಹುವಿನ ಕೃಪೆಯಿಂದ ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಆರು ಬಾರಿ ಶಾಸಕನಾಗಲು ಸಾಧ್ಯವಾಗಿದೆ. ಅದಕ್ಕೆ ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವು ಕಾರಣ. ತಮ್ಮ ಸಮುದಾಯದ ವ್ಯಕ್ತಿ ಕಣಕ್ಕೆ ನಿಂತಿದ್ದಾರೆಂದು ಹತ್ತು-ಹದಿನೈದು ಸಾವಿರ ಮಂದಿ ಮತ ಹಾಕುತ್ತಿದ್ದರೆ, ಈ ರಮಾನಾಥ ರೈ ಯಾವತ್ತೋ ಮಾಜಿಯಾಗುತ್ತಿದ್ದ ಎಂದು ಭಾಷಣದಲ್ಲಿ ಹೇಳಿದ್ದರು ಎನ್ನಲಾಗಿದೆ.

ಈ ರೀತಿಯ ಭಾಷಣದಿಂದಾಗಿ ಸುನೀಲ್ ಕುಮಾರ್ ಅವರು ಧರ್ಮಗಳ ನಡುವಿನ ಸೌಹಾರ್ದತೆಗೆ ಭಂಗ ತಂದಿದ್ದಾರೆ ಎಂದು ಪೋಲಿಸ್ ದೂರಿನಲ್ಲಿ ತಿಳಿಸಲಾಗಿದೆ.

ಬಂಟ್ವಾಳ ನಗರ ಠಾಣಾ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love

Exit mobile version